ಸುಸಂಸ್ಕೃತ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮ ಜ್ಞಾನ ಮತ್ತು ಸಂಸ್ಕಾರ ಬಹಳ ಮುಖ್ಯ.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಧರ್ಮದಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಗುರು ಎಂದರೆ ಕೇವಲ ಜ್ಞಾನ ಬೋಧಿಸುವವರಲ್ಲ. ಶಿಷ್ಯನಿಗೆ ಸನ್ಮಾರ್ಗ ತೋರಿಸಿ ಸತ್ಯ ಧರ್ಮ ನೀತಿ ಮತ್ತು ಮಾನವೀಯ ಮೌಲ್ಯ ಬೆಳೆಸುವ ಮಾರ್ಗದರ್ಶಕರು. ಸುಸಂಸ್ಕೃತ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮ ಜ್ಞಾನ ಮತ್ತು ಸಂಸ್ಕಾರ ಬಹಳ ಮುಖ್ಯವೆಂದು ಬಾಳೆಹೊನ್ನೂರಿನ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಬುಧವಾರ ಸಮೀಪದ ಮುಕ್ತಿಮಂದಿರ ಕ್ಷೇತ್ರದಲ್ಲಿ ಲಿಂ. ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಲಿಂಗಾಂಗ ಸಾಮರಸ್ಯದ ೪೪ನೇ ಪುಣ್ಯಾರಾಧನೆ ಹಾಗೂ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಮಾಜದಲ್ಲಿ ಶಾಂತಿ ಸಾಮರಸ್ಯ ಸ್ಥಾಪಿಸುವುದು ಗುರುವಿನ ಕಾರ್ಯವಾಗಿದೆ. ಧರ್ಮದ ನಿಜವಾದ ತತ್ವಗಳನ್ನು ಜನರಿಗೆ ತಿಳಿಸುವುದು ಮತ್ತು ಬಡವರ, ದುರ್ಬಲರ, ಮಹಿಳೆಯರ ಏಳಿಗೆಗಾಗಿ ಶ್ರಮಿಸುವುದು ಗುರುವಿನ ಕರ್ತವ್ಯವಾಗಿದೆ. ಗುರು ಧರ್ಮದ ದಾರಿದೀಪ. ಅವರ ಮಹಿಮೆ ಜ್ಞಾನದಲ್ಲಿ ಮಾತ್ರವಲ್ಲ ಸಮಾಜಕ್ಕೆ ನೀಡುವ ಬೋಧನೆ ಮತ್ತು ಉತ್ತಮ ಸಂಸ್ಕಾರಗಳಲ್ಲಿ ಅಡಗಿದೆ. ಗುರುವಿನ ಮಾರ್ಗದರ್ಶನದಿಂದ ವ್ಯಕ್ತಿಯ ಬದುಕು ಬೆಳಗುತ್ತದೆ. ಸಮಾಜದಲ್ಲಿ ಧರ್ಮ, ಶಾಂತಿ ಮತ್ತು ಮಾನವೀಯತೆ ನೆಲೆಸುತ್ತದೆ ಎಂದರು.

ಸಾನಿಧ್ಯ ವಹಿಸಿದ್ದ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು ಆಶೀರ್ವಚನ ನೀಡಿ, ಧರ್ಮ ಮತ್ತು ಆಧ್ಯಾತ್ಮಿಕ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತ್ಯ ಶಾಂತಿ ಕರುಣೆ ಮತ್ತು ಮಾನವೀಯತೆ ಪಾಲಿಸಬೇಕು. ಸಮಾಜದಲ್ಲಿ ಐಕ್ಯತೆ ಪರಸ್ಪರ ಗೌರವ ಮತ್ತು ಸಹಬಾಳ್ವೆ ಸದ್ಗುಣ ಸಂಪಾದಿಸಿಕೊಳ್ಳಬೇಕು ಎಂದರು.

ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾತಿ ಮತಗಳ ಭೇದ ಭಾವಕ್ಕಿಂತ ಮಾನವೀಯತೆಗೆ ಆದ್ಯತೆ ನೀಡಬೇಕು. ಮಾನವೀಯತೆಯು ನಮ್ಮ ನಡೆನುಡಿಗಳಿಗೆ ಆಧಾರವಾಗಿರಲಿ. ಭಾರತದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಮಠಗಳು ಹಾಗೂ ಪೀಠಗಳು ಮಹತ್ವದ ಸ್ಥಾನವನ್ನು ಹೊಂದಿವೆ.

ವಿಧಾನಸಭೆಯ ಸಭಾಧ್ಯಕ್ಷ ಜಿ.ಎಸ್. ಪಾಟೀಲ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಮಾತನಾಡಿದರು.

ಮಲೆಬೆನ್ನೂರಿನ ಬಿ.ಎಂ. ನಂಜಯ್ಯನವರಿಗೆ ರಂಭಾಪುರಿ ಜಗದ್ಗುರು ವೀರಗಂಗಾಧರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಸ್.ಗಡ್ಡದ್ದೇವರಮಠ, ರಾಮಣ್ಣ ಲಮಾಣಿ, ಐ.ಎಸ್. ಚಿಕ್ಕನಗೌಡರ, ಟಿ. ಈಶ್ವರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ನೇತೃತ್ವ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಸರ್ವರನ್ನು ಸ್ವಾಗತಿಸಿದರು.

ಈ ವೇಳೆ ಎಮ್ಮಿಗನೂರು, ಬಂಕಾಪುರ, ಗಿರಿಸಾಗರ, ಬಿಲ್ವಕೆರೂರು, ಸುಳ್ಳ, ಸಿದ್ದರಬೆಟ್ಟಕ್ಷೇತ್ರ, ಮಳಲಿ ಸಂಸ್ಥಾನಮಠ, ಹಿರೇವಡ್ಡಟ್ಟಿ, ಕಲಾದಗಿ, ಅರಗಿನದೋಣಿ, ಕರೆವಾಡಿಮಠ ಮೊದಲಾದ ಮಠಾಧೀಶರು ಮತ್ತು ಗಣ್ಯರು ಪಾಲ್ಗೊಂಡಿದ್ದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.