ಸಾರಾಂಶ
ಬ್ಯಾಡಗಿ:ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ತಾಲೂಕು ಅಂಬಿಗರ ಚೌಡಯ್ಯ ಹಾಗೂ ಬೆಸ್ತರ ಸಂಘ ವತಿಯಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಈ ವೇಳೆ ಮಾತನಾಡಿದ ತಾಲೂಕಾಧ್ಯಕ್ಷ ನಿಂಗಪ್ಪ ಹೆಗ್ಗಣ್ಣನವರ, ನಿಜಶರಣ ಅಂಬಿಗರ ಚೌಡಯ್ಯ ಅವರು ಕಳೆದ ಹನ್ನರಡನೇ ಶತಮಾನದಲ್ಲಿಯೇ ಸಾಮಾಜಿಕ ನ್ಯಾಯ ಸೇರಿದಂತೆ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಧ್ವನಿ ಎತ್ತಿದ್ದಾರೆ. ಸಮಾಜದ ಜನರನ್ನು ತಿದ್ದುವ ನಿಟ್ಟಿನಲ್ಲಿ ತಮ್ಮ ಬದುಕನ್ನೇ ಮಡಿಪಾಗಿಟಿದ್ದವರ ಮೂರ್ತಿಯನ್ನು ಭಗ್ನಗೊಳಿಸಿ ಇಡೀ ನಾಗರಿಕ ಸಮಾಜವೇ ತಲೆ ತಗ್ಗುವಂತೆ ಮಾಡಿದವರನ್ನು ಕೂಡಲೇ ಬಂಧಿಸುವ ಮೂಲಕ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು.ಖಜಾಂಚಿ ಚಂದ್ರು ಮುಳಗುಂದ ಮಾತನಾಡಿ, ಸಮಾಜದಲ್ಲಿ ಸಾರ್ವಜನಿಕ ಶಾಂತಿಗೆ, ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡಿ ಬೆಸ್ತ, ಕೋಲಿ ಸಮಾಜದ ಜನತೆಯ ಭಾವನೆಗಳನ್ನು ಕೆರಳಿಸಿದ್ದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳು ಯಾವುದೇ ಜಾತಿ ಜನಾಂಗಕ್ಕೆ ಸೇರಿರಲಿ ತಾರತಮ್ಯ ಮಾಡದೇ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳನ್ನು ಮತ್ತು ಅಂತಹ ಕುಕೃತ್ಯ ಎಸಗಲು ಪರೋಕ್ಷವಾಗಿ ಪ್ರಚೋದನೆ ನೀಡಿರುವ ಸಮಾಜ ವಿರೋಧಿ ಶಕ್ತಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಂಡು ಜೈಲಿಗಟ್ಟಬೇಕು. ತಕ್ಷಣ ಬಂಧಿಸದಿದ್ದಲ್ಲಿ ಸಮಾಜವು ಉಗ್ರ ಸ್ವರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಕಾರ್ಯದರ್ಶಿ ಹೊನ್ನಪ್ಪ ಸಣ್ಣಬಾರ್ಕಿ ಮಾತನಾಡಿ, ಅಂಬಿಗರ ಚೌಡಯ್ಯ ಮೂರ್ತಿಯ ಅವಮಾನ ಇಡೀ ರಾಜ್ಯದ ಸಮಸ್ತ ಬೆಸ್ತ, ಕೋಲಿ ಸಮಾಜದವರಿಗೆ ನೋವುಂಟು ಮಾಡಿದೆ. ಸಮಾಜದ ಸ್ವಾಭಿಮಾನಕ್ಕೆ ಅಪಮಾನ ಮತ್ತು ಜನತೆಯ ಭಾವನೆಗಳಿಗೆ ತೀವ್ರ ಧಕ್ಕೆಯುಂಟಾಗಿದೆ ಎಂದು ಕಿಡಿಕಾರಿದರು.ಕುಲಗುರು ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸುವ ಮೂಲಕ ಗಡಿಪಾರು ಮಾಡಬೇಕೆಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಗುಡ್ಡಪ್ಪ ಬಾರ್ಕಿ, ಚಂದ್ರಪ್ಪ ದೊಡ್ಮನಿ, ಯಲ್ಲಪ್ಪ ಓಲೇಕಾರ, ಚಂದ್ರಪ್ಪ ಬಾರ್ಕಿ, ರವಿ ಹುಲ್ಮನಿ, ಗುತ್ತೆಪ್ಪ ಕೊಪ್ಪದ, ಸುರೇಶ ಹುಳುಬುತ್ತಿ, ಜೀತೇಂದ್ರ ಸುಣಗಾರ, ಜಯಪ್ಪ ಸುಣಗಾರ, ಮಂಜಣ್ಣ ಸುಣಗಾರ, ಶಿವರಾಜ ಹಿರೇಮತ್ತೂರ, ಮಾಲತೇಶ ದೇವಗೇರಿ, ಅಶೋಕ ಊದಗಟ್ಟಿ, ಮಂಜಪ್ಪ ಬಾರ್ಕಿ, ನಾಗರಾಜ ರಿತ್ತಿ ಉಮೇಶ ಕೊಕ್ಕನವರ ಸೇರಿದಂತೆ ಇನ್ನಿತರರಿದ್ದರು.