ಕಡಲಕೊರೆತ ನಿಯಂತ್ರಣಕ್ಕೆ ತಡೆಗೋಡೆ ನಿರ್ಮಿಸಲು ಆಗ್ರಹ

| Published : Sep 19 2024, 01:50 AM IST

ಕಡಲಕೊರೆತ ನಿಯಂತ್ರಣಕ್ಕೆ ತಡೆಗೋಡೆ ನಿರ್ಮಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕುಸಿದು ಬೀಳುತ್ತಿರುವ ತಡೆಗೋಡೆಯ ಮೇಲೆಯೇ ಅಥವಾ ಅದರ ಹೊರಗೆ ತಡೆಗೋಡೆ ನಿರ್ಮಾಣ ಮಾಡಿದರೆ ಶಾಶ್ವತ ಪರಿಹಾರ ದೊರೆತಂತಾಗುತ್ತದೆ.

ಅಂಕೋಲಾ: ಸಮುದ್ರದ ಅಲೆಗಳಿಂದ ಆಗಬಹುದಾದ ಅನಾಹುತವನ್ನು ತಪ್ಪಿಸಲು ತಡೆಗೋಡೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ತಾಲೂಕಿನ ಮಂಜಗುಣಿ ಗ್ರಾಮಸ್ಥರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಿದರು.ತಾಲೂಕಿನ ಹೊನ್ನೆಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಳಗಿನ ಮಂಜಗುಣಿಯ ಸಮುದ್ರ ನದಿಯ ತೀರದಲ್ಲಿ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಸುಮಾರು 25 ವರ್ಷಗಳ ಹಿಂದೆ ಸಮುದ್ರ ಕೊರೆತ ಹೆಚ್ಚಾಗಿ ಸುಮಾರು 800 ಮೀಟರ್‌ನಷ್ಟು ಉದ್ದವಾದ ದೊಡ್ಡ ಬಂಡೆ ಕಲ್ಲುಗಳಿಂದ ತಡೆಗೋಡೆ ಹಾಕಲಾಗಿತ್ತು. ಆದರೆ ಅದೀಗ ಗಂಗಾವಳಿ ನದಿಯ ನೆರೆಹಾವಳಿ ಹಾಗೂ ಸಮುದ್ರದ ರಕ್ಕಸ ಅಲೆಗಳಿಂದ ಸಂಪೂರ್ಣ ತಡೆಗೋಡೆ ಕುಸಿದು ಬೀಳುತ್ತಿದೆ. ದೊಡ್ಡ ಸಮುದ್ರದ ಅಲೆಗಳಿಂದ ನೀರು ಮನೆಯ ಅಡಿಪಾಯಕ್ಕೆ ಬಂದು ಹೋಗುತ್ತಿದೆ. ಇದೇ ತರಹ ಇನ್ನು ಪ್ರವಾಹ ಹಾಗೂ ಅಲೆಗಳು ಮುಂದುವರಿದರೆ ತೀರದ ಮನೆಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿ ಆಗುವ ಸಂಭವವಿದೆ.ನದಿಯ ತೀರದಲ್ಲಿ ಹೆಚ್ಚಾಗಿ ಬಡ ಮೀನುಗಾರರು ಹಾಗೂ ರೈತರು ವಾಸಿಸುತ್ತಿದ್ದು, ಮನೆಯ ಜಾಗ ಬಿಟ್ಟರೆ ಬೇರೆ ಯಾವುದೇ ನಿವೇಶನ ಇಲ್ಲ. ಮೀನುಗಾರಿಕೆಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದೇವೆ. ಕಡಲ ಕೊರೆತದಿಂದ ಭಯದ ವಾತಾವರಣ ಸೃಷ್ಟಿಯಾಗಿದ್ದು, ಇರುವ ಮನೆಗಳನ್ನು ಕಳೆದುಕೊಂಡರೆ ನಿರ್ಗತಿಕರಾಗುವ ಆತಂಕದಲ್ಲಿ ಜೀವಿಸುತ್ತಿದ್ದೇವೆ. ಕುಸಿದು ಬೀಳುತ್ತಿರುವ ತಡೆಗೋಡೆಯ ಮೇಲೆಯೇ ಅಥವಾ ಅದರ ಹೊರಗೆ ತಡೆಗೋಡೆ ನಿರ್ಮಾಣ ಮಾಡಿದರೆ ಶಾಶ್ವತ ಪರಿಹಾರ ದೊರೆತಂತಾಗುತ್ತದೆ. ಈ ಮೊದಲು ನಿರ್ಮಿಸಿದ ತಡೆಗೋಡೆಯನ್ನು ಮುಕ್ತಾಯದ ಸ್ಥಳದಿಂದ ಮೇಲ್ಭಾಗದವರೆಗೆ ತಡೆಗೋಡೆಯನ್ನು ನಿರ್ಮಿಸಿಕೊಡಬೇಕು.ಆದ್ದರಿಂದ ನದಿಯ ತೀರದ ಜನರ ಪರಿಸ್ಥಿತಿಯನ್ನು ಪರಿಶೀಲಿಸಿ, ಕನಿಷ್ಠ 500 ಮೀಟರ್ ತುರ್ತು ಅಲೆ ತಡೆಗೋಡೆ ನಿರ್ಮಾಣ ಮಾಡಿ ರಕ್ಷಿಸಬೇಕೆಂದು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಕರಾವಳಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಪ್ರಕಾಶ ವಿ. ತಾಂಡೇಲ, ಪ್ರಮುಖರಾದ ನಾಗರಾಜ ಎಸ್. ನಾಯ್ಕ, ಶ್ರೀಪಾದ ಡಿ. ತಾಂಡೇಲ, ಅಭಿಷೇಕ ಕೆ. ತಾಂಡೇಲ, ಅಕ್ಷಯ ಎಂ. ತಾಂಡೇಲ, ರಾಜು ಡಿ. ತಾಂಡೇಲ, ಸಂತೋಷ ಜಿ. ತಾಂಡೇಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.