ಸಾರಾಂಶ
ಹಗರಿಬೊಮ್ಮನಹಳ್ಳಿ: ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ಮೋಸವಾಗುತ್ತಿದೆ. ಖರೀದಿದಾರರು ಬೆಳೆಗೆ ತಕ್ಕ ಬೆಲೆಯನ್ನು ನೀಡಿ ಖರೀದಿಸಬೇಕು. ರೈತರಿಗೆ ಅನ್ಯಾಯವಾಗುತ್ತಿರುವುದನ್ನು ಎಪಿಎಂಸಿಯವರು ಕೂಡಲೇ ತಡೆಯಬೇಕು ಎಂದು ರಾಜ್ಯರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಹೇಳಿದರು.
ಪಟ್ಟಣದ ಎಪಿಎಂಸಿಯಲ್ಲಿ ನಡೆದ ರೈತರು ಬೆಳೆದ ಮೆಕ್ಕೆಜೋಳ ಖರೀದಿಯಲ್ಲಿ ವರ್ತಕರು ತೂಕದಲ್ಲಿ ತಾರತಮ್ಯ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.ರೈತರು ಬೆಳೆದ ಬೆಳೆಗಳಿಗೆ ವರ್ತಕರು ಸೂಕ್ತ ಬೆಲೆ ನೀಡಬೇಕು. ತೂಕದಲ್ಲಿ ಯಾವುದೇ ಮೋಸ ಮಾಡದಂತೆ ವರ್ತಕರಿಗೆ ಮಾರ್ಗದರ್ಶನ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು. ರೈತರ ಬೆಳೆಗಳ ಖರೀದಿಯಲ್ಲಿ ಮೋಸವಾದರೆ ಕೃಷಿ ಉತ್ಪನ್ನ ಮಾರುಕಟ್ಟೆಯವರು ವರ್ತಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಬೇಕಾಬಿಟ್ಟಿ ಖರೀದಿ ಮಾಡುತ್ತಿರುವ ವರ್ತಕರಿಗೆ ಎಪಿಎಂಸಿಯವರು ಪರವಾನಗಿ ನೀಡಬಾರದು. ಎಪಿಎಂಸಿ ಈ ಮುಂಚೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಈಗ ಹಂದಿಗಳ ವಾಸಸ್ಥಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ನ.7ರಂದು ನಡೆಯುವ ಸಭೆಗೆ ಎಲ್ಲ ವರ್ತಕರು ಬರಬೇಕು. ಬರದಿದ್ದ ವರ್ತಕರ ಲೈಸೆನ್ಸ್ ರದ್ದು ಮಾಡಿ ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಸೂಚಿಸಿದರು. ತಂಬ್ರಹಳ್ಳಿ ಸೇರಿ ಹೆಚ್ಚು ಬೇಡಿಕೆ ಇರುವ ಕಡೆ ಎಪಿಎಂಸಿಯವರು ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಆರ್.ಕವಿತಾ ಮಾತನಾಡಿ, ರೈತರಿಗೆ ಸಹಾಯವಾಗಲು ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು. ರೈತರ ಮಾಹಿತಿಗಾಗಿ ಸಹಾಯವಾಣಿ ಸೇವೆ ನೀಡಬೇಕು. ಮುಂದಿನ ಶುಕ್ರವಾರ ನಡೆಯುವ ಸಭೆಯಲ್ಲಿ ಅಡಳಿತಾಧಿಕಾರಿ ಕಡ್ಡಾಯವಾಗಿ ಹಾಜರಿರಬೇಕು. ಎಪಿಎಂಸಿಯ ವರ್ತಕರು ಮತ್ತು ಹೊರಗಡೆ ಖರೀದಿದಾರರು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು. ಇಲ್ಲವಾದರೆ ಅವರ ಖರೀದಿಗೆ ನೀಡಿದ ಪರವಾನಗಿ ರದ್ದುಗೊಳಿಸಲಾಗುವುದು ಎಂದರು.ಎಪಿಎಂಸಿ ಕಾರ್ಯದರ್ಶಿ ಶೈಲಜಾ ಮಾತನಾಡಿ, ರೈತರು ಬೆಳೆದ ಬೆಳೆಯಲ್ಲಿ ಕಸಕಡ್ಡಿ ಹೆಚ್ಚಿದ್ದರೆ ವರ್ತಕರು ಹೆಚ್ಚು ಬಾಜ್ ತೆಗೆದುಕೊಳ್ಳುತ್ತಾರೆ ಎಂದಾಗ, ರೈತ ಮುಖಂಡ ಮಾಬುಸಾಬ್ ಪ್ರತಿಕ್ರಿಯಿಸಿ, ರೈತರು ಬೆಳೆದ ಬೆಳೆಗಳನ್ನು ಸ್ವಚ್ಛವಾಗಿ ಕೊಟ್ಟರೂ ಒಂದೇ ಬೆಲೆಯಲ್ಲಿ ಖರೀದಿ ಮಾಡುವುದರ ಜೊತೆಗೆ ಎಲ್ಲದಕ್ಕೂ ಒಂದೇ ಬಾಜ್ ಮುರಿಯುತ್ತಿದ್ದಾರೆ. ವರ್ತಕರು ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ರೈತರು ಬೆಳೆದ ಬೆಳೆಗಳ ಬಗ್ಗೆ ತಪ್ಪು ಮಾಹಿತಿ ನೀಡುತ್ತಾರೆ. ಎಪಿಎಂಸಿ ಅಧಿಕಾರಿಗಳು ವರ್ತಕರು ಖರೀದಿ ಮಾಡುವ ಸ್ಥಳಗಳಿಗೆ ಎಂದೂ ಭೇಟಿ ನೀಡುವುದಿಲ್ಲ ಎಂದು ಹರಿಹಾಯ್ದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹರಟೆ ಕಾಳಪ್ಪ ಮಾತನಾಡಿ, ಪಕ್ಕದ ಕೊಟ್ಟೂರು ಎಪಿಎಂಸಿಯಲ್ಲಿ 50 ಕೆಜಿ ಖರೀದಿಗೆ 300 ಗ್ರಾಂ ಬಾಜ್ ತೆಗೆದರೆ, ಹಗರಿಬೊಮ್ಮನಹಳ್ಳಿ ಎಪಿಎಂಸಿಯಲ್ಲಿ 50 ಕೆಜಿಗೆ 800 ಗ್ರಾಂ ಬಾಜ್ ತೆಗೆಯುತ್ತಿರುವುದು ಎಪಿಎಂಸಿ ಅಧಿಕಾರಿಗಳಿಗೆ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ. ಹೀಗೆ ಮುಂದುವರಿದರೆ ರೈತರ ಬೆಳೆಗಳಿಗೆ ಪ್ರಾಮಾಣಿಕ ಬೆಲೆ ಸಿಗುವುದು ಯಾವಾಗ ಎಂದು ಪ್ರಶ್ನಿಸಿದರು.ಸರಿಯಾಗಿ ಮಾಹಿತಿ ನೀಡದ ವರ್ತಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಹಶೀಲ್ದಾರ್ ಅವರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಹನಸಿ ದೇವರಾಜ, ರೈತ ಸಂಘದ ಹಲಿಗೇರಿ ಮಹೇಶ, ನಾಗಪ್ಪ, ಎಚ್.ಬಸಜ್ಜ, ವಸಂತ, ವರ್ತಕರ ಸಂಘದ ಬಾದಾಮಿ ಮೃತ್ಯುಂಜಯ, ಶ್ರೀಧರ ಶೆಟ್ರು, ಕಾರ್ಯದರ್ಶಿ ಬಸವರಾಜ, ಪ್ರಕಾಶ ಗೌಡ, ನಾಗರಾಜ ಪೊತಗುಳಿ, ಮಲ್ಲಣ್ಣ, ಮಾರುತಿ ಶೆಟ್ರು, ಸುಧಾ ವೆಂಕಟೇಶ, ದೇವರೆಡ್ಡಿ, ಎಪಿಎಂಸಿ ಅಧಿಕಾರಿಗಳಾದ ಮಂಜುನಾಥ್, ಕೊಟ್ರೇಶ ರೈತ ಮುಖಂಡರು ಇದ್ದರು.;Resize=(128,128))
;Resize=(128,128))