Demand to cancel the selection of Sharavana as a director of the Bhovi Development Corporation

ಕನ್ನಡಪ್ರಭ ವಾರ್ತೆ ಹಿರಿಯೂರು

ಸರ್ಕಾರವು ಭೋವಿ ಅಭಿವೃದ್ಧಿ ನಿಗಮಕ್ಕೆ ನೂತನ ನಿರ್ದೇಶಕರಾಗಿ ಆಯ್ಕೆ ಮಾಡಿರುವ ತಾಲೂಕಿನ ಎಲ್ ಶರವಣ ಅವರ ಆಯ್ಕೆ ಪ್ರಾಮಾಣಿಕ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಡಿದ ವಂಚನೆಯಾಗಿದ್ದು ತಾಲೂಕು ಭೋವಿ ಸಮಾಜ ಶರವಣ ಆಯ್ಕೆಯನ್ನು ವಿರೋಧಿಸುತ್ತದೆ ಎಂದು ತಾಲೂಕು ಭೋವಿ ಸಮಾಜದ ಅಧ್ಯಕ್ಷ ಕೆ ತಿಮ್ಮರಾಜ್ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಂಗ್ರೆಸ್ ಪಕ್ಷಕ್ಕೆ ದಶಕಗಳ ಕಾಲ ದುಡಿದ ನಮ್ಮ ಸಮಾಜದ ಮುಖಂಡರು ಹಾಗೂ ಅನೇಕ ಹಿರಿಯ ಮುಖಂಡರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇರುವುದನ್ನು ಖಂಡಿಸುತ್ತೇವೆ. ಇದುವರೆಗೂ ಎಂದೂ ಕಾಂಗ್ರೆಸ್ ಪಕ್ಷಕ್ಕೆ ದುಡಿಯದ, ಹಲವಾರು ವರ್ಷ ಬೇರೆ ಪಕ್ಷದ ಮುಖಂಡರ ಹಿಂದೆ ಓಡಾಡಿಕೊಂಡಿರುವವರನ್ನು ಆಯ್ಕೆ ಮಾಡಲಾಗಿದೆ. ಶರವಣರವರು ಬಿಜೆಪಿ ಪಕ್ಷಕ್ಕೆ ದುಡಿದಿದ್ದು ಎಲ್ಲೂ ಕೂಡ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ. ಕಾಂಗ್ರೆಸ್ ಪಕ್ಷದ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿರುವ ಅವರ ಆಯ್ಕೆ ಪಕ್ಷದ ನಿಷ್ಠಾವಂತರಿಗೆ ಮಾಡಿದ ಮೋಸವಾಗಿದೆ. ತಾಲೂಕಿನ ಭೋವಿ ಸಮಾಜದ ವತಿಯಿಂದ ನಡೆದ ಯಾವುದೇ ಕಾರ್ಯಕ್ರಮಗಳಾಗಲಿ,ಧಾರ್ಮಿಕ ಚಟುವಟಿಕೆಗಳಲ್ಲಿ ಆಗಲಿ ಎಲ್ಲೂ ಸಹ ಇವರು ಭಾಗವಹಿಸಿಲ್ಲ. ಆದುದರಿಂದ ಶರವಣರ ಆಯ್ಕೆಯನ್ನು ತಾಲೂಕಿನ ಭೋವಿ ಸಮಾಜ ತೀವ್ರವಾಗಿ ಖಂಡಿಸುತ್ತದೆ.ಇದರಿಂದಾಗಿ ಮುಂಬರುವ ಉಪ ಚುನಾವಣೆಗೂ ಕೂಡ ನಮ್ಮ ಸಮಾಜದ ವಿರೋಧವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನುಭವಿಸಬೇಕಾಗುತ್ತದೆ. ಭೋವಿ ಸಮಾಜಕ್ಕೆ ತಿಳಿಸದೇ ಯಾರೋ ಮಾಡಿರುವ ಹುನ್ನಾರ ಇದಾಗಿದ್ದು ಶರವಣ ಅವರ ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕರ ಆಯ್ಕೆಯನ್ನು ಈ ಕೂಡಲೇ ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಚಿತ್ರ 1 ಕೆ.ತಿಮ್ಮರಾಜು