ಹಾವೇರಿ ನಗರದ ಹೊರವಲಯ ಕೇರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ವಿ.ವಿ ಉಳಿಸಿ ಹೋರಾಟ ಸಮಿತಿ ನಿಯೋಗದಿಂದ ವಿವಿ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಮನವಿ ಸಲ್ಲಿಸಲಾಯಿತು.

ಹಾವೇರಿ: ಹಾವೇರಿ ವಿಶ್ವವಿದ್ಯಾಲಯ ಪ್ರಥಮ ಘಟಿಕೋತ್ಸವವನ್ನು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿಯೇ ಆಯೋಜಿಸುವಂತೆ ಒತ್ತಾಯಿಸಿ ವಿ.ವಿ. ಉಳಿಸಿ ಹೋರಾಟ ಸಮಿತಿಯಿಂದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ನಗರದ ಹೊರವಲಯ ಕೇರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳ ಭೇಟಿ ಮಾಡಿದ ವಿ.ವಿ ಉಳಿಸಿ ಹೋರಾಟ ಸಮಿತಿ ನಿಯೋಗವು, ನಮ್ಮ ಜಿಲ್ಲೆಯ ಹೆಮ್ಮೆಯಾಗಿರುವ ಹಾವೇರಿ ವಿಶ್ವವಿದ್ಯಾಲಯದ ಪ್ರಪ್ರಥಮ ಘಟಿಕೋತ್ಸವ ಕಾರ್ಯಕ್ರಮ ನಡೆಯುತ್ತಿರುವುದು ಖುಷಿಯ ಸಂಗತಿ. ಹಲವು ಸೌಕರ್ಯಗಳ ಕೊರತೆ ಹಾಗೂ ಸಮಸ್ಯೆಗಳ ಮಧ್ಯೆಯೂ ಹಲವು ಸಂಸ್ಥೆಗಳೊಂದಿಗೆ ಒಪ್ಪಂದ ಹಾಗೂ ಸಹಕಾರಗಳೊಂದಿಗೆ ವಿಶ್ವವಿದ್ಯಾಲಯವು ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ, ನಮ್ಮ ಹಾವೇರಿ ವಿಶ್ವವಿದ್ಯಾಲಯ ಪ್ರಥಮ ವರ್ಷದ ಘಟಿಕೋತ್ಸವ ಕಾರ್ಯಕ್ರಮವನ್ನು ಸಭಾಂಗಣ ಹಾಗೂ ಭದ್ರತೆಯ ಕಾರಣದಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಡುವುದರ ಬದಲಾಗಿ ಬೇರೆ ಕಡೆ ಮಾಡುತ್ತಿರುವುದು ಬೇಸರದ ಸಂಗತಿ ಎಂದರು.ಮನವಿ ಸ್ವೀಕರಿಸಿದ ಕುಲಪತಿಗಳು, ಹೋರಾಟ ಸಮಿತಿಯ ಸದಾಶಯವೇ ನಮ್ಮದು ಆಗಿದೆ. ನಾವು ಕೂಡ ಕ್ಯಾಂಪಸ್‌ನಲ್ಲಿಯೇ ಘಟಿಕೋತ್ಸವ ಮಾಡಬೇಕೆಂದುಕೊಂಡಿದ್ದೇವು, ಆದರೆ ವಿಶ್ವವಿದ್ಯಾಲಯದ ಆವರಣದಲ್ಲಿ ಘಟಿಕೋತ್ಸವ ನಡೆಸಲು ಅಗತ್ಯವಿರುವ ಬಿಲ್ಡಿಂಗ್ ಹಾಗೂ ಸಭಾಂಗಣವಿಲ್ಲ; ಜರ್ಮನ್ ಟೆಂಟ್ ಹಾಕಿ ಕಾರ್ಯಕ್ರಮ ನಡೆಸಲು ಲಕ್ಷಾಂತರ ರು. ಖರ್ಚು ಆಗುತ್ತದೆ. ಅಷ್ಟು ಹಣ ವಿ.ವಿಯಲ್ಲಿ ಇಲ್ಲ. ಅದಕ್ಕಾಗಿ ನಮ್ಮ ವಿಶ್ವವಿದ್ಯಾಲಯದ ಸಂಯೋಜಿತವಾಗಿರುವ ಜಿ.ಎಚ್.ಕಾಲೇಜ್ ಆವರಣದಲ್ಲಿ ಘಟಿಕೋತ್ಸವ ಮಾಡಲಾಗುತ್ತಿದೆ. ಆದರೂ ರಾಜ್ಯಪಾಲರು ವಿಶ್ವವಿದ್ಯಾಲಯಕ್ಕೆ ಬಂದು ಭೇಟಿ ಮಾಡುವಂತೆ ವಿನಂತಿಸಿದ್ದೇವೆ. ರಾಜ್ಯಪಾಲರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಸಂಚಾಲಕ ಬಸವರಾಜ ಪೂಜಾರ, ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಂ.ಆಂಜನೇಯ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಕರ್ನಾಟಕ ರಾಜ್ಯ ರೈತ ಸಂಘದ ಶಹರ ಘಟಕದ ಅಧ್ಯಕ್ಷ ಸುರೇಶ ಛಲವಾದಿ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುಳಾ ಅಕ್ಕಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಮಕಬುಲ್ ಎಂ.ಕೆ, ಸಹಮತ ಸಂಸ್ಥೆಯ ಸಹಕಾರ್ಯದರ್ಶಿ ಲಕ್ಷ್ಮಿಪ್ರಭ ಹುಲ್ಲೂರು, ಡಿವೈಎಫ್‌ಐ ಜಿಲ್ಲಾ ಮುಖಂಡ ಖಲಂದರ್ ಅಲ್ಲಿಗೌಡ್ರ, ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಅರುಣ ನಾಗಾವತ್, ಚೈತ್ರಾ ಕೊರವರ, ಬಾಲ ಸಂಘ ಮುಖಂಡರಾದ ಧನುಷ್ ದೊಡ್ಮನಿ ಇದ್ದರು.