ಬ್ರಿಟಿಷರ ಆಳ್ವಿಕೆಯಲ್ಲಿದ್ದ ಪೊಲೀಸ್ ಟೋಪಿ ಬದಲಾವಣೆಗೆ ಆಗ್ರಹ

| Published : Jul 02 2025, 12:20 AM IST

ಬ್ರಿಟಿಷರ ಆಳ್ವಿಕೆಯಲ್ಲಿದ್ದ ಪೊಲೀಸ್ ಟೋಪಿ ಬದಲಾವಣೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದಂತಹ ಪೊಲೀಸ್ ಟೋಪಿ ಮತ್ತು ಕಾನೂನುಗಳು ಬದಲಾಗಬೇಕು ಎಂದು ಒತ್ತಾಯಿಸಿ ಪೊಲೀಸ್ ಟೋಪಿ ಧರಿಸಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ರಾಮನಗರ: ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದಂತಹ ಪೊಲೀಸ್ ಟೋಪಿ ಮತ್ತು ಕಾನೂನುಗಳು ಬದಲಾಗಬೇಕು ಎಂದು ಒತ್ತಾಯಿಸಿ ಪೊಲೀಸ್ ಟೋಪಿ ಧರಿಸಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಹಳೇ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕರ್ನಾಟಕ ಪೊಲೀಸರಿಗೆ ಗೌರವಯುತವಾದ ಟೋಪಿ ಕಲ್ಪಿಸಬೇಕು ಎಂದು ಘೋಷಣೆ ಕೂಗಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದಂತಹ ಪೊಲೀಸ್ ಟೋಪಿ ಮತ್ತು ಕಾನೂನುಗಳು ಈಗಲೂ ಮುಂದುವರೆಯುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅವುಗಳ ಬದಲಾವಣೆ ಬಗ್ಗೆ ಗಂಭೀರವಾಗಿ ಚಿಂತನೆ ನಡೆದಿಲ್ಲ. ಪೊಲೀಸ್ ಟೋಪಿಯನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಶಕ್ತಿ ಇಲ್ಲ ಎಂದು ಟೀಕಿಸಿದರು.

ಈ ಹಿಂದೆ 1969ರಲ್ಲಿ ನಮ್ಮ ಪೊಲೀಸರಿಗೆ ಚಡ್ಡಿ ಇತ್ತು. ಆಗ ನಾನು ವಿಧಾನಸಭೆ ಸದಸ್ಯನಾಗಿದ್ದೆ. ಮದರಾಸಿನಲ್ಲಿ ಪೊಲೀಸರಿಗಿದ್ದ ಪ್ಯಾಂಟ್ ಮಾದರಿಯನ್ನು ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಮೇಲೆ ಒತ್ತಡ ಹೇರಿ ಜಾರಿಗೆ ತಂದೆವು. ಆಗಿನಿಂದ ಕರ್ನಾಟಕ ಪೊಲೀಸರಿಗೆ ಪ್ಯಾಂಟ್ ವ್ಯವಸ್ಥೆ ಜಾರಿಗೆ ಬಂದಿತು.

ಈಗ ಪೊಲೀಸರು ಧರಿಸುತ್ತಿರುವ ಟೋಪಿ ಹೆಲ್ಮೆಟ್ ನಷ್ಟೇ ತೂಕವಿದೆ. ಇದರಿಂದ ಮೆದುಳಿಗೆ ಅಪಾಯವಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ತೀರ್ಮಾನ ಮಾಡಿ ಟೋಪಿ ಬದಲಾವಣೆ ಮಾಡಬೇಕು.ಈಗ ರಾಜ್ಯ ಸರ್ಕಾರ ತೆಲಂಗಾಣ ಮಾದರಿ ಟೋಪಿ ತರಲು ಹೊರಟಿದೆ. ಕರ್ನಾಟಕಕ್ಕೆ ಇನ್ನೊಂದು ರಾಜ್ಯದ ಮಾದರಿ ಬೇಡ. ತೂಕ ಕಡಿಮೆ ಇರುವ ಕರ್ನಾಟಕ ರಾಜ್ಯದ ಪ್ರತ್ಯೇಕ ಟೋಪಿ ತಯಾರಾಗಲಿ ಎಂದು ಒತ್ತಾಯಿಸಿದರು.

ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಸಮರ್ಪಕವಾಗಿ ನಡೆಯುತ್ತಿಲ್ಲ. 25 ವರ್ಷ ಕಳೆದರೂ ಪೊಲೀಸರು ಒಂದೇ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ತಂದೆ - ತಾಯಿಯನ್ನು ನೋಡಲು ಸಾಧ್ಯವಾಗುವುದಿಲ್ಲ. ಕನಿಷ್ಠ 5 ವರ್ಷದ ಮೇಲೆ ಕೆಲಸ ಮಾಡಿದ ಪೊಲೀಸರನ್ನು ಸ್ವಂತ ಜಿಲ್ಲೆಗಳಿಗೆ ವರ್ಗಾವಣೆ ಮಾಡಬೇಕು. ಆ ರೀತಿ ಕಾನೂನನ್ನು ಸಡಿಲಗೊಳಿಸಬೇಕು. ಇದು ಸರ್ಕಾರದ ಆದ್ಯ ಕರ್ತವ್ಯ ಎಂದು ಹೇಳಿದರು.

ರಾಜ್ಯಪಾಲರಿಗೆ ಕರ್ನಾಟಕದ ಬಗ್ಗೆ ಗೌರವ ಇದ್ದರೆ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಕನ್ನಡದಲ್ಲಿಯೇ ಭಾಷಣ ಮಾಡಲಿ. ಕಳೆದ ಮೂರು ವರ್ಷಗಳಿಂದಲೂ ರಾಜ್ಯಪಾಲರು ಹಿಂದಿಯಲ್ಲಿಯೇ ಮಾತನಾಡುತ್ತಿದ್ದಾರೆ. ಈ ಬಾರಿ ನಾಲ್ಕು ಸಾಲುಗಳಾದರು ಸರಿಯೇ ಕನ್ನಡದಲ್ಲಿಯೇ ಮಾತನಾಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ. ಜಗದೀಶ್ ಐಜೂರು, ಜಿಲ್ಲಾಧ್ಯಕ್ಷ ಸಿ.ಎಸ್. ಜಯಕುಮಾರ್, ಮುಖಂಡರಾದ ಯತೀಶ್, ತಾಲೂಕು ಅಧ್ಯಕ್ಷ ‍ವಿ.ಎನ್. ಗಂಗಾಧರ್ , ಜಿಲ್ಲಾ ದಲಿತ ಘಟಕದ ಅಧ್ಯಕ್ಷ ಕೆ. ಜಯರಾಮು, ಬಿಡದಿ ಘಟಕದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಕೃಷ್ಣಮೂರ್ತಿ, ತಾಲೂಕು ಮಹಿಳಾ ಅಧ್ಯಕ್ಷರಾದ ಭಾಗ್ಯಸುಧಾ, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ನಗರ ಘಟಕದ ಅಧ್ಯಕ್ಷ ಪ್ರಸನ್ನ, ವಾಟಾಳ್ ನಾಗರಾಜ್ ರವರ ಆಪ್ತ ಕಾರ್ಯದರ್ಶಿ ಪಾರ್ಥಸಾರಥಿ, ಮಹಿಳಾ ಮುಖಂಡರಾದ ವಿಜಯಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.

ಕೋಟ್ ...................

ದ್ವಿಭಾಷಾ ಸೂತ್ರ ಜಾರಿ ತರಲಿ:

ಮಹಾರಾಷ್ಟ್ರದಲ್ಲಿ ತ್ರಿಭಾಷಾ ಸೂತ್ರಕ್ಕೆ ಕೊಕ್ ಕೊಟ್ಟು ದ್ವಿಭಾಷಾ (ಮರಾಠಿ ಮತ್ತು ಇಂಗ್ಲೀಷ್) ಸೂತ್ರ ಅನುಸರಿಸುತ್ತಿದ್ದು, ಹಿಂದಿ ಭಾಷೆಯನ್ನು ತಿರಸ್ಕರಿಸಿದ್ದಾರೆ. ಆದರೆ, ನಮ್ಮಲ್ಲಿ ಇನ್ನೂ ರಾಗ ಹಾಡುತ್ತಿದ್ದೇವೆ. ಕರ್ನಾಟಕ ಸರ್ಕಾರ ಕೂಡಲೇ ದ್ವಿಭಾಷಾ ಸೂತ್ರ ಜಾರಿಗೆ ತರಬೇಕು. ಹಿಂದಿ ಹೇರಿಕೆ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿ ಬಳಿ ತಮಟೆ ಚಳವಳಿ ಮಾಡುತ್ತೇವೆ.

- ವಾಟಾಳ್ ನಾಗರಾಜ್, ರಾಜ್ಯಾಧ್ಯಕ್ಷರು, ಕನ್ನಡ ಚಳವಳಿ ವಾಟಾಳ್ ಪಕ್ಷ

1ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ಐಜೂರು ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.