ಸಾರಾಂಶ
ನರಗುಂದ ಹೊರಕೇರಿ ಓಣಿಯ ಶ್ರೀ ಮಾರುತಿ ದೇವಸ್ಥಾನದ ಹತ್ತಿರ ಖಾಸಗಿಯವರು ಸರ್ಕಾರಿ ಜಾಗ ಆಕ್ರಮಿಸಿಕೊಂಡು ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಈ ಜಾಗ ತೆರವುಗೊಳಿಸಬೇಕು ಎಂದು ಶ್ರೀ ಸಮಗಾರ ಹರಳಯ್ಯ, ಶ್ರೀ ದುರ್ಗಾದೇವಿ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘ (ಎಸ್‌ಸಿ) ಪದಾಧಿಕಾರಿಗಳು ತಹಸೀಲ್ದಾರಗೆ ಮನವಿ ನೀಡಿದರು.
ನರಗುಂದ: ಹೊರಕೇರಿ ಓಣಿಯ ಶ್ರೀ ಮಾರುತಿ ದೇವಸ್ಥಾನದ ಹತ್ತಿರ ಖಾಸಗಿಯವರು ಸರ್ಕಾರಿ ಜಾಗ ಆಕ್ರಮಿಸಿಕೊಂಡು ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಈ ಜಾಗ ತೆರವುಗೊಳಿಸಬೇಕು ಎಂದು ಶ್ರೀ ಸಮಗಾರ ಹರಳಯ್ಯ, ಶ್ರೀ ದುರ್ಗಾದೇವಿ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘ (ಎಸ್‌ಸಿ) ಪದಾಧಿಕಾರಿಗಳು ತಹಸೀಲ್ದಾರಗೆ ಮನವಿ ನೀಡಿದರು.
ಅವರು ಗುರುವಾರ ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ತಹಸೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳಿಗೆ ಮನವಿ ನೀಡಿದ ಬಳಿಕ ಮಾತನಾಡಿದರು. ಹೊರಕೇರಿ ಓಣಿಯ ಶ್ರೀ ಮಾರುತಿ ದೇವಸ್ಥಾನ ಇದ್ದು, ಅದರ ಪಕ್ಕದಲ್ಲಿ ತಾಜುಸಾಬ ಅಡಗೋಡಿವರ ಮನೆಯಿದೆ. ಅವರು ಜಾಗ ಆಕ್ರಮಿಸಿ ಮನೆ ಕಟ್ಟಿಸಿಕೊಳ್ಳುತ್ತಿದ್ದಾರೆ. ಈ ಸರ್ಕಾರಿ ಜಾಗದಲ್ಲಿ ನಾವು ಪ್ರತಿ ವರ್ಷ ಗಜಾನನ ಮೂರ್ತಿ ಪ್ರತಿಷ್ಠಾಪನೆ, ಜಾತ್ರೆ, ಕಾಮ ದಹನ ಇತ್ಯಾದಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಈ ಕುರಿತು ಮನೆ ನಿರ್ಮಾಣ ಮಾಡುತ್ತಿರುವವರಿಗೆ ಮನವರಿಕೆ ಮಾಡಿ, ಜಾಗ ಖಾಲಿ ಬಿಡುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆ ಅಧಿಕಾರಿಗಳು, ತಹಸೀಲ್ದಾರ್ ಕೂಡಲೇ ಈ ಜಾಗ ತೆರವಿಗೆ ಕ್ರಮ ಕೈಗೊಳ್ಳಬೇಕು. ಜಾಗ ಅತಿಕ್ರಮಿಸಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಹಾಗೊಂದು ವೇಳೆ ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ನಾವು ಓಣಿಯ ಸಮಸ್ತ ಗುರು-ಹಿರಿಯರು ಸೇರಿಕೊಂಡು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಕಂದಾಯ ನಿರೀಕ್ಷಕ ಎಸ್.ಎಲ್. ಪಾಟೀಲ ಮನವಿ ಸ್ವೀಕರಿಸಿದರು. ಶ್ರೀ ಸಮಗಾರ ಹರಳಯ್ಯ, ಶ್ರೀ ದುರ್ಗಾದೇವಿ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘ (ಎಸ್‌ಸಿ) ಪದಾಧಿಕಾರಿಗಳಾದ ಗಣಪತಿ ದತ್ತರಗಿ, ಮಂಜುನಾಥ ಅರಕೇರಿ, ಶ್ರೀನಿವಾಸ ಹೊನಕೇರಿ, ರಾಜು ತೊರಗಲ್ಲ, ಯಲ್ಲಪ್ಪ ದುತ್ತರಗಿ, ಮಲ್ಲಿಕಾರ್ಜುನ ತೊರಗಲ್ಲ, ಈಶ್ವರ ಮಾಚಕನೂರ, ಅಣ್ಣಪ್ಪ ಅರಕೇರಿ, ವೆಂಕಟೇಶ ಕಾನಪೇಠ, ಕುಮಾರ ಬೆಟಗೇರಿ, ರಜಿತ ಹೊನಕೇರಿ, ಮಂಜು ಬವಲತ್ತಿ, ಮುತ್ತು ಇದ್ದರು.