ಸಾರಾಂಶ
-ದಲಿತ ಸಂಘರ್ಷ ಸಮಿತಿಯಿಂದ ನಗರಸಭೆ ಅಧಿಕಾರಿಗಳಿಗೆ ಮನವಿ ಪತ್ರ
-----ಕನ್ನಡಪ್ರಭ ವಾರ್ತೆ ಶಹಾಪುರ
ನಗರದ ಮಾರ್ಕೆಟ್ ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡದಂತೆ ತಳ್ಳುಬಂಡಿಗಳು ರಸ್ತೆಯನ್ನು ಆವರಿಸಿಕೊಂಡಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ಕೂಡಲೇ ರಸ್ತೆಯಲ್ಲಿ ಅಡ್ಡದಿಡ್ಡಿ ಆಗಿ ನಿಲ್ಲಿಸಿದ ತಳ್ಳು ಬಂಡೆಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ನಗರಸಭೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹೊನ್ನಪ್ಪ ಗಂಗನಾಳ, ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ದಿನನಿತ್ಯ ಸಾವಿರಾರು ಜನ ಮಾರುಕಟ್ಟೆಗೆ ತರಕಾರಿ, ದಿನಸಿ ವಸ್ತುಗಳನ್ನು ಖರೀದಿಸಲು ಬರುತ್ತಾರೆ. ಸಾರ್ವಜನಿಕರಿಗೆ ಮಾರುಕಟ್ಟೆಯಲ್ಲಿ ಮುಕ್ತವಾಗಿ ವ್ಯಾಪಾರ ಮಾಡಲು ಆಗದಂತ ಪರಿಸ್ಥಿತಿ ಇದೆ. ಎಲ್ಲೆಂದರಲ್ಲಿ ರಸ್ತೆಯುದ್ದಕ್ಕೂ ತಳ್ಳು ಬಂಡಿಗಳು ಆವರಿಸಿಕೊಂಡಿವೆ ಎಂದರು.
ಇದರ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಸಾಕಷ್ಟು ದೂರು ಸಲ್ಲಿಸಿದರೂ ಅಧಿಕಾರಿಗಳು ರಸ್ತೆ ಆವರಿಸಿಕೊಂಡಿರುವ ಕಲ್ಲು ಬಂಡೆಗಳನ್ನು ತೆರವುಗೊಳಿಸಲು ಮುಂದೆ ಬರುತ್ತಿಲ್ಲ. ಇದರಿಂದ ಜನಸಾಮಾನ್ಯರು ತರಕಾರಿ ಮಾರುಕಟ್ಟೆಗೆ ಆತಂಕದಲ್ಲೇ ಆಗಮಿಸುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ತಳ್ಳು ಬಂಡಿಗಳನ್ನು ತೆರವುಗೊಳಿಸಲು ಮುಂದಾಗುವಂತೆ ಒತ್ತಾಯಿಸಿದರು.ಸಮಿತಿಯ ವಿಭಾಗದ ಅಧ್ಯಕ್ಷ ಸುಭಾಸ್ ತಳವಾರ ಮಾತನಾಡಿ, ತಳ್ಳು ಬಂಡಿಗಳು ರಸ್ತೆ ಅತಿಕ್ರಮಿಸಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ನೀಡುತ್ತಿವೆ. ತಕ್ಷಣ ಮಾರುಕಟ್ಟೆಯ ಮಳಿಗೆಯಲ್ಲಿ ವ್ಯಾಪಾರ ಮಾಡುವಂತೆ ಸೂಚಿಸಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಒಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಸಂಘಟನೆಯಿಂದ ನಗರಸಭೆ ಕಾರ್ಯಾಲಯದ ಮುಂದೆ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು. ಸಮಿತಿಯ ತಾಲೂಕು ಅಧ್ಯಕ್ಷ ಮಾಳಪ್ಪ ಸಲಾದಪುರ, ಚಂದ್ರಶೇಖರ್ ಗೋಗಿ, ಪಂಡಿತ್ ಮದ್ನಾಳ ಸೇರಿದಂತೆ ಇತರರಿದ್ದರು.
-----ಫೋಟೊ: ಶಹಾಪುರ ನಗರದ ರಸ್ತೆಯಲ್ಲಿ ಅಡ್ಡ ದಿಡ್ಡಿ ನಿಲ್ಲಿಸುವ ತಳ್ಳುಬಂಡಿ ತೆರವುಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರಸಭೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
20ವೈಡಿಆರ್4