ಸಾರಾಂಶ
ಹಿರೇಪಡಸಲಗಿ ಗ್ರಾಮದಿಂದ ಸಾವಳಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತಾಲೂಕು ಮುಖ್ಯ ರಸ್ತೆಯ ಮಧ್ಯದಲ್ಲಿ ಬೃಹದಾಕಾರದ ಗುಂಡಿ ಬಿದ್ದಿದ್ದು, ಕೂಡಲೇ ಮುಚ್ಚಿಸುವಂತೆ ತಾಲೂಕು ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಹಿರೇಪಡಸಲಗಿ ಗ್ರಾಮದಿಂದ ಸಾವಳಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತಾಲೂಕು ಮುಖ್ಯ ರಸ್ತೆಯ ಮಧ್ಯದಲ್ಲಿ ಬೃಹದಾಕಾರದ ಗುಂಡಿ ಬಿದ್ದಿದ್ದು, ಕೂಡಲೇ ಮುಚ್ಚಿಸುವಂತೆ ತಾಲೂಕು ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ ಆಗ್ರಹಿಸಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಹಿರೇಪಡಸಲಗಿ ಗ್ರಾಮದಿಂದ ಸಾವಳಗಿ ಹೋಬಳಿಗೆ ಹೋಗುವ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿಯಿಂದ ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ. ದಿನಂಪ್ರತಿ ನೂರಾರು ವಾಹನಗಳು ಓಡಾಡುವ ಈ ರಸ್ತೆಯಲ್ಲಿ ಗುಂಡಿಯಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಈ ಕುರಿತು ಪಿಡಬ್ಲುಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ಕೈತೊಳೆದುಕೊಳ್ಳುತ್ತಿದ್ದು, ಸಾರ್ವಜನಿಕರ ಓಡಾಟಕ್ಕೆ ತುಂಬ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಲೋಕೋಪಯೋಗಿ ಇಲಾಖೆಯ ಎಇಇ ಸೇರಿದಂತೆ ನಾಲ್ವರು ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಸೇರಿ ಕಚೇರಿ ಸಮಯದಲ್ಲಿ ಪಾರ್ಟಿ, ಮೋಜು ಮಸ್ತಿ ಮಾಡಿ ಅಮಾನತ್ತಿನಲ್ಲಿದ್ದಾರೆ. ಇದರಿಂದ ಸಾರ್ವಜನಿಕರ ಅಹವಾಲು ಕೇಳಲು ಈಗ ಯಾರೂ ಇಲ್ಲದಂತಾಗಿದೆ. ಕಚೇರಿಗೆ ಹೋದರೆ ಸಮರ್ಪಕ ಉತ್ತರ ನೀಡುವವರು ಯಾರು ಇಲ್ಲದಾಗಿದೆ. ಜಿಲ್ಲಾಧಿಕಾರಿಗಳು ಅಪಘಾತ. ಪ್ರಾಣಹಾನಿಗಳಾಗದಂತೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಗೋಪಾಲ ಬಳಗಾರ, ಶ್ರೀಶೈಲ ಮೈಗೂರ, ಸಂಗಪ್ಪ ಕುಂಬಾರ, ಶಂಕರ ತುಂಗಳ, ದರೆಪ್ಪ ಬಿದರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.