ಹಾಲ್ಕುರಿಕೆ ಗ್ರಾಮದ ದೊಡ್ಡ ಕೆರೆಗೆ ಹೇಮಾವತಿ ನೀರು ಹರಿಸಲು ತೊಂದರೆಯಾಗಿರುವ ೩೩ ಎಕರೆ ಅರಣ್ಯ ಭೂಮಿಗೆ ಬದಲಾಗಿ ಇಲಾಖೆಗೆ ಪರ್ಯಾಯ ಭೂಮಿ ನೀಡಿ ಹೇಮಾವತಿ ನಾಲಾ ಕಾಮಗಾರಿ ಸುಗಮವಾಗಿ, ಶೀಘ್ರವಾಗಿ ನಡೆಯುವಂತೆ ಶಾಸಕ ಕೆ. ಷಡಕ್ಷರಿ ಹಾಗೂ ಜಿಲ್ಲಾಡಳಿತ ಮಾಡಬೇಕು ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಹಾಲ್ಕುರಿಕೆ ಗ್ರಾಮದ ದೊಡ್ಡ ಕೆರೆಗೆ ಹೇಮಾವತಿ ನೀರು ಹರಿಸಲು ತೊಂದರೆಯಾಗಿರುವ ೩೩ ಎಕರೆ ಅರಣ್ಯ ಭೂಮಿಗೆ ಬದಲಾಗಿ ಇಲಾಖೆಗೆ ಪರ್ಯಾಯ ಭೂಮಿ ನೀಡಿ ಹೇಮಾವತಿ ನಾಲಾ ಕಾಮಗಾರಿ ಸುಗಮವಾಗಿ, ಶೀಘ್ರವಾಗಿ ನಡೆಯುವಂತೆ ಶಾಸಕ ಕೆ. ಷಡಕ್ಷರಿ ಹಾಗೂ ಜಿಲ್ಲಾಡಳಿತ ಮಾಡಬೇಕು ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಒತ್ತಾಯಿಸಿದರು.ಹಾಲ್ಕುರಿಕೆ ಕೆರೆಗೆ ನೀರು ಹರಿಸಲು ಒತ್ತಾಯಿಸಿ ತಾಲೂಕಿನ ಹಾಲ್ಕುರಿಕೆ ಗ್ರಾಮದಿಂದ ಸೋಮವಾರ ತಿಪಟೂರಿಗೆ ಪಾದಯಾತ್ರೆ ಮೂಲಕ ಆಗಮಿಸಿ ನಗರದ ಪ್ರವಾಸಿ ಮಂದಿರದ ಬಳಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಪಟ್ಟದದೇವರ ಕೆರೆಯಿಂದ ಹೇಮಾವತಿ ನಾಲೆ ನಿರ್ಮಾಣವಾದರೆ ಹಾಲ್ಕುರಿಕೆ ಕೆರೆಗೆ ನೀರು ಬೇಗ ಹರಿಯುತ್ತದೆ. ಕಳೆದ ನಾಲ್ಕು ವರ್ಷದ ಹಿಂದೆಯೇ ಈ ಯೋಜನೆಗೆ ಚಾಲನೆ ಸಿಕ್ಕಿದ್ದರೂ ಇದುವರೆಗೂ ಕೆಲಸ ಆಗಿಲ್ಲ. ಇದಕ್ಕಿರುವ ತೊಂದರೆಯನ್ನು ನಿವಾರಿಸಲು ಶಾಸಕರು ಹಾಗೂ ಜಿಲ್ಲಾಡಳಿ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಅವರು ಆಗ್ರಹಿಸಿದರು.ಈ ಭಾಗದಲ್ಲಿ ನೀರಿಗೆ ತುಂಬಾ ತೊಂದರೆ ಇದ್ದು ಅಂತರ್ಜಲ ಪಾತಾಳ ಹೊಕ್ಕು ರೈತರಿಗೆ ಮೊದಲಿನಿಂದಲೂ ತೊಂದರೆಯಾಗುತ್ತಿದೆ. ಹಾಗಾಗಿ ಹೇಮಾವತಿ ನೀರು ಇಲ್ಲಿನ ಕೆರೆಗೆ ಹರಿದರೆ ಈ ಭಾಗದ ಹತ್ತಾರು ಗ್ರಾಮಗಳ ಅಂತರ್ಜಲ ಹೆಚ್ಚಾಗುತ್ತದೆ. ಹಾಗಾಗಿ ಹೇಮಾವತಿ ನಾಲೆಗೆ ಹೋಗುವ ಅರಣ್ಯದ ಬದಲಾಗಿ ಬೇರೆಕಡೆ ಭೂಮಿ ನೀಡುವ ವಿಷಯ ನೆನೆಗುದಿಗೆ ಬಿದ್ದಿದೆ. ಶಾಸಕರಾದಿಯಾಗಿ ಯಾವ ಅಧಿಕಾರಿಗಳು ಈ ಕೆಲಸಕ್ಕೆ ಮುಂದಾಗದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈಗಲಾದರೂ ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ನಿರಂತರ ಸಭೆಗಳನ್ನು ನಡೆಸುವ ಮೂಲಕ ಈ ಕೆಲಸವನ್ನು ಶೀಘ್ರವಾಗಿ ಮುಗಿಯುವಂತೆ ಮಾಡಬಹುದು. ಇನ್ನು ಒಂದು ತಿಂಗಳಲ್ಲಿ ತಾಲೂಕು ಆಡಳಿತಕ್ಕೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಾಲೆ ನಿರ್ಮಾಣಕ್ಕೆ ಇರುವ ಅಡೆತಡೆ ನಿವಾರಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಶಿವಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಬೋರ್ವೆಲ್ ಮಧುಸೂದನ್, ಮುಖಂಡರುಗಳು ಹಾಘೂ ರೈತರಾದ ಸುದರ್ಶನ್, ನಟರಾಜು, ಚೇತನ್, ಕಿರಣ್, ದಕ್ಷಿಣಮೂರ್ತಿ, ಯೋಗೀಶ್, ಬಸವರಾಜು, ಕುಮಾರಣ್ಣ, ಜಯಣ್ಣ, ಸಂತೋಷ್, ರಮೇಶ್, ವಿಶ್ವಣ್ಣ ಇನ್ನಿತರರು ಭಾಘವಹಿಸಿದ್ದರು.