ಈ ಗಣಿ ಟೆಂಡರನ್ನು ವಿಘ್ನೇಶ್ವರ ಕಂಪನಿ ಪಡೆದುಕೊಂಡಿದೆ.
ಸಂಡೂರು: ತಾಲೂಕಿನ ಎನ್‌ಎಂಡಿಸಿ (ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್)ಗೆ ಸೇರಿದ ಕುಮಾರಸ್ವಾಮಿ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ಕನ್ನಡಿಗ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಶುಕ್ರವಾರ ಎನ್‌ಎಂಡಿಸಿ ಕಚೇರಿ ಮುಂದೆ ಧರಣಿ ನಡೆಸಿದರು.ಗಣಿಯಲ್ಲಿ ಅದಿರು ತೆಗೆಯುವ ಗುತ್ತಿಗೆ ಪಡೆದಿದ್ದ ರಾಕ್‌ಟೆಕ್ ಇಂಜಿನಿಯರ್ಸ್ ಕಂಪನಿಯ ಟೆಂಡರ್ ಅವಧಿ ಮುಗಿದಿದೆ. ಪ್ರಸಕ್ತ ಸಾಲಿನಲ್ಲಿ ಈ ಗಣಿ ಟೆಂಡರನ್ನು ವಿಘ್ನೇಶ್ವರ ಕಂಪನಿ ಪಡೆದುಕೊಂಡಿದೆ. ವಿಘ್ನೇಶ್ವರ ಕಂಪನಿಯವರು ರಾಕ್‌ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸದ ಕಾರಣ ನೂರಾರು ಕಾರ್ಮಿಕರು ಹಾಗೂ ಅವರ ಕುಟುಂಬಗಳು ಸಂಕಷ್ಟಕ್ಕೆ ಈಡಾಗಿವೆ. ವಿಘ್ನೇಶ್ವರ ಕಂಪನಿಯವರು ಹೊರ ರಾಜ್ಯದಿಂದ ಬಂದ ಕಾರ್ಮಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿರುವುದು ಸ್ಥಳೀಯ ಕಾರ್ಮಿಕರಲ್ಲಿ ಆತಂಕ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಅವರು ಧರಣಿಯ ಹಾದಿ ಹಿಡಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಕರವೇ ಮುಖಂಡರು ಎನ್‌ಎಂಡಿಸಿ ಕಚೇರಿ ಮುಂದೆ ಧರಣಿ ನಡೆಸಿ, ರಾಕ್‌ಟೆಕ್ ಎಂಜಿನಿಯರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿ ಎನ್‌ಎಂಡಿಸಿ ಜನರಲ್ ಮ್ಯಾನೇಜರ್ ವೇಲು ವಸಂತ್, ಈ ಕುರಿತು ಅಗತ್ಯ ಕ್ರಮಕೈಗೊಳ್ಳುವಂತೆ ಸಂಸದ ಈ. ತುಕಾರಾಂ ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ಕರವೇ ತಾಲೂಕು ಘಟಕದ ಅಧ್ಯಕ್ಷ ರಾಜು ಪಾಳೆಗಾರ, ಮುಖಂಡರಾದ ರವಿ, ದಸ್ತಗಿರಿ ಸಾಬ್, ಅಬ್ಬಾಸ್ ಅಲಿ ಇದ್ದರು.