ಆನ್‌ಲೈನ್ ಔಷಧಿ ವ್ಯಾಪಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ನೀಡಿದ್ದ ಕರೆ ಮೇರೆಗೆ ಬುಧವಾರ ದೇಶದಾದ್ಯಂತ ಮೆಡಿಕಲ್ ಅಂಗಡಿಗಳ ಬಂದ್ ಮಾಡಲಾಗಿದ್ದು, ಜಿಲ್ಲೆಯಲ್ಲಿಯೂ ಈ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಆಸ್ಪತ್ರೆ ಫಾರ್ಮಸಿ, ಜನೌಷಧಿ, ಅಪೋಲೋ, ಮೆಡ್‌ಪ್ಲಸ್ ಎಂದಿನಂತೆ ಓಪನ್

ಜಿಲ್ಲೆಯಲ್ಲಿ ಮೆಡಿಕಲ್ ಅಂಗಡಿಗಳ ಬಂದ್‌ಗೆ ವ್ಯಾಪಕ ಬೆಂಬಲ

ಕನ್ನಡಪ್ರಭ ವಾರ್ತೆ ಕಾರವಾರ

ಆನ್‌ಲೈನ್ ಔಷಧಿ ವ್ಯಾಪಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ನೀಡಿದ್ದ ಕರೆ ಮೇರೆಗೆ ಬುಧವಾರ ದೇಶದಾದ್ಯಂತ ಮೆಡಿಕಲ್ ಅಂಗಡಿಗಳ ಬಂದ್ ಮಾಡಲಾಗಿದ್ದು, ಜಿಲ್ಲೆಯಲ್ಲಿಯೂ ಈ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಜಿಲ್ಲೆಯ 400 ಕ್ಕೂ ಹೆಚ್ಚು ಔಷಧಿ ಅಂಗಡಿಗಳು ಬಂದ್ ಆಗಿದ್ದರೆ, ನಗರದ ಬಹುತೇಕ ಔಷಧ ಅಂಗಡಿಗಳ ಮಾಲೀಕರು ಪೂರ್ಣ ಒಮ್ಮತದಿಂದ ಈ ಬಂದ್‌ನಲ್ಲಿ ಪಾಲ್ಗೊಂಡಿದ್ದರಿಂದ, ದಿನನಿತ್ಯ ಔಷಧಿಗಾಗಿ ಆಗಮಿಸುತ್ತಿದ್ದ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ಕೆಲಕಾಲ ತೊಂದರೆ ಉಂಟಾಯಿತು. ಆದರೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಹಾಗೂ ರೋಗಿಗಳಿಗೆ ತೊಂದರೆಯಾಗದಂತೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಫಾರ್ಮಸಿಗಳು, ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳು ಹಾಗೂ ಅಪೋಲೋ, ಮೆಡ್‌ಪ್ಲಸ್‌ನಂತಹ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಿ ಅಗತ್ಯ ಔಷಧಿಗಳನ್ನು ವಿತರಿಸಿದವು.ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ನಿಯಂತ್ರಣರಹಿತವಾಗಿ ಔಷಧಿಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಸ್ಥಳೀಯವಾಗಿ ಅಂಗಡಿ ಇಟ್ಟುಕೊಂಡಿರುವ ಔಷಧ ವ್ಯಾಪಾರಿಗಳಿಗೆ ತೀವ್ರ ಆರ್ಥಿಕ ನಷ್ಟ ಉಂಟಾಗುತ್ತಿದೆ. ಇದಲ್ಲದೆ, ವೈದ್ಯರ ಅಧಿಕೃತ ಸಲಹೆ ಅಥವಾ ಚೀಟಿ (ಪ್ರಿಸ್ಕ್ರಿಪ್ಷನ್) ಇಲ್ಲದೆಯೇ ಔಷಧ ವಿತರಣೆ ಮಾಡಲಾಗುತ್ತಿದ್ದು, ಇದು ನಕಲಿ ಔಷಧಿಗಳ ಮಾರಾಟದ ಜಾಲಕ್ಕೂ ದಾರಿಮಾಡಿಕೊಡುತ್ತಿದೆ. ನಿಯಂತ್ರಣವಿಲ್ಲದ ಇಂತಹ ಆನ್‌ಲೈನ್ ಮಾರಾಟದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಔಷಧ ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಗಂಭೀರ ಸಮಸ್ಯೆಯ ಕುರಿತು ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಆನ್‌ಲೈನ್ ಔಷಧಿ ವ್ಯಾಪಾರಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದು, ಸೂಕ್ತ ನಿಯಂತ್ರಣ ಹೇರಬೇಕು ಎಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ. ಕಾರವಾರದಲ್ಲಿ ಬಹುತೇಕ ಎಲ್ಲಾ ಮೆಡಿಕಲ್ ಅಂಗಡಿಗಳು ಬಂದ್‌ಗೆ ಬೆಂಬಲಿಸಿ ಬಾಗಿಲು ಮುಚ್ಚಲಾಗಿತ್ತು. ಯಾವುದೇ ಅಹಿತಕರ ಘಟನೆಗಳಿಲ್ಲದೆ ಬಂದ್ ಸಂಪೂರ್ಣ ಶಾಂತಿಯುತವಾಗಿ ನಡೆಯಿತು.