ಹುಲಸೂರ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣಹುಲಸೂರ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.ಹುಲಸೂರ ಪಟ್ಟಣದ ತಹಸೀಲ್ ಕಚೇರಿ ಸಮೀಪದಲ್ಲಿ ನಡೆಯುತ್ತಿರುವ ಅಹೋರಾತ್ರಿ ಸತ್ಯಾಗ್ರಹದಲ್ಲಿ ರೈತರು ಪ್ರತಿದಿನ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯುತ್ತಿದ್ದು, ಶುಕ್ರವಾರ ಬೆಳಿಗ್ಗೆ ರೈತರು ಧರಣಿ ಸ್ಥಳದ ಎದುರುಗಡೆ ಸ್ನಾನ ಮಾಡಿದರು.ಇದೇ ಸಂದರ್ಭದಲ್ಲಿ ಹುಲಸೂರ ಮಠದ ಶಿವಾನಂದ ಸ್ವಾಮೀ ನೇತೃತ್ವದಲ್ಲಿ ಧರಣಿ ಸ್ಥಳದಲ್ಲಿಯೇ ಸಾಮೂಹಿಕ ಲಿಂಗಪೂಜೆ ನೆರವೇರಿಸಿದರು. ಶ್ರೀಗಳು ಮಾತನಾಡಿ, ಹುಲಸೂರು ತಾಲೂಕಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರವಾಗಿ ಹದಗೆಟ್ಟಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟದಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ರೈತರ ಪರಿಸ್ಥಿತಿ ಅರಿತು ಸರ್ಕಾರ ಕೂಡಲೇ ಹುಲಸೂರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿದರು.ಹುಲಸೂರ ತಾಲೂಕು ಸೇರಿದಂತೆ ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಅಧಿಕೃತವಾಗಿ ಘೋಷಣೆ ಮಾಡುವವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಧರಣಿ ಮುಂದುವರಿಸಿದ್ದಾರೆ.ಈ ಸಂದರ್ಭದಲ್ಲಿ ನವಕಲ್ಯಾಣ ಕರ್ನಾಟಕ ಮಹಾಸಭಾದ ಡಾ.ಶಂಕರ ಗೌಡ, ರೈತ ಸಂಘದ ಹುಲಸೂರ ತಾಲೂಕು ಅಧ್ಯಕ್ಷ ಬಸವರಾಜ ಚವರೆ, ಉಪಾಧ್ಯಕ್ಷ ಸುನೀಲ್ ಭುಜಂಗೆ, ಕಾರ್ಯದರ್ಶಿ ರಾಜಕುಮಾರ ನಿಡೋದೆ ಹಾಗೂ ರೈತ ಮುಖಂಡರಾದ ರಮೇಶ ಭೂಪಳೆ, ಸೋಮನಾಥ ನಂದಗೆ, ಮಲ್ಲಿಕಾರ್ಜುನ ಧಬಾಲೆ, ಶಿವಕುಮಾರ ಕನ್ನಾಡೆ, ನೂರ್ ಅಹ್ಮದ್ ಎಂ., ಚಂದ್ರಕಾಂತ ದೇಟ್ನೆ, ಅಪ್ಪಾರಾವ್ ಖಂಡಾಳೆ, ವೀರಾರೆಡ್ಡಿ ಸೇರಿದಂತೆ ಇನ್ನಿತರರು ಇದ್ದರು.