ಸರ್ಕಾರ ಒಂದು ವಾರದಲ್ಲಿ ತಾಲೂಕು ಬರಪೀಡಿತ ಎಂದು ಘೋಷಣೆ ಮಾಡದಿದ್ದರೆ ಪಕ್ಷಾತೀತವಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮುಖಂಡರು ಎಚ್ಚರಿಸಿದರು.
ಮುಂಡರಗಿ: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಪರಿಶೀಲಿಸಿದರೂ ಸರ್ಕಾರ ಮುಂಡರಗಿ ತಾಲೂಕನ್ನು ಬರಪೀಡಿತ ತಾಲೂಕಿನ ಪಟ್ಟಿಯಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಮುಂಡರಗಿ ಮಂಡಲದ ಬಿಜೆಪಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೊಟ್ರೇಶ ಅಂಗಡಿ, ಕರಬಸಪ್ಪ ಹಂಚಿನಾಳ ಮಾತನಾಡಿ, ಸತತ ಬರಗಾಲದಿಂದ ಬಳಲುತ್ತಿರುವ ಮುಂಡರಗಿ ತಾಲೂಕು ಈ ಬಾರಿಯೂ ಮಳೆ ಇಲ್ಲದೆ ರೈತರು ಹಣ ಖರ್ಚು ಮಾಡಿಕೊಂಡು ಬಿತ್ತನೆ ಮಾಡಿದ್ದಾರೆ. ಗಜೇಂದ್ರಗಡ ಮಾತ್ರ ಬರ ತಾಲೂಕು ಘೋಷಣೆ ಮಾಡಿ ನಿಜವಾಗಿ ತೊಂದರೆ ಅನುಭವಿಸುತ್ತಿರುವ ಮುಂಡರಗಿ ತಾಲೂಕನ್ನು ಬರಗಾಲ ತಾಲೂಕು ಘೋಷಣೆಯಾಗದಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ. ಸರ್ಕಾರ ಒಂದು ವಾರದಲ್ಲಿ ತಾಲೂಕು ಬರಪೀಡಿತ ಎಂದು ಘೋಷಣೆ ಮಾಡದಿದ್ದರೆ ಪಕ್ಷಾತೀತವಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಬಿಜೆಪಿ ಮಹಿಳಾ ಅಧ್ಯಕ್ಷ ಪವಿತ್ರ ಕಲ್ಲುಕುಟಿಗರ, ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಗೋಣೆಪ್ಪ ಚವಡಾಳ, ದೇವಪ್ಪ ಇಟಗಿ ಮಾತನಾಡಿ, ತಾಲೂಕಿನ ರೈತರಿಗೆ ವಿಶೇಷ ಪ್ಯಾಕೇಜು ಬಿಡುಗಡೆಗೊಳಿಸಬೇಕು. ಬರ ಹಿನ್ನೆಲೆ ಬ್ಯಾಂಕ್‌ಗಳು ರೈತರ ಸಾಲ ತುಂಬುವಂತೆ ಒತ್ತಾಯಿಸಬಾರದು. ಈ ಬಗ್ಗೆ ಬ್ಯಾಂಕ್‌ಗಳಿಗೆ ಆದೇಶಿಸಬೇಕು ಎಂದರು.
ಬಿಜೆಪಿ ಪ್ರ ಕಾರ್ಯದರ್ಶಿ ಪ್ರಶಾಂತಗೌಡ ಗುಡದಪ್ಪನವರ ಮನವಿ ಓದಿದರು. ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಡಾ. ಕುಮಾರಸ್ವಾಮಿ ಹಿರೇಮಠ, ಯುವ ಘಟಕದ ಅಧ್ಯಕ್ಷ ಶಿವಕುಮಾರ ಕುರಿ, ಶಿವಪ್ಪ ಚಿಕ್ಕಣ್ಣವರ, ಪರಶುರಾಮ ಕರಡಿಕೊಳ್ಳ, ಯಲ್ಲಪ್ಪ ಗಣಾಚಾರಿ, ಅಜ್ಜಪ್ಪ ಲಿಂಬಿಕಾಯಿ, ದೇವು ಹಡಪದ, ರವಿಗೌಡ ಪಾಟೀಲ, ರವಿ ಲಮಾಣಿ, ಶಂಕರ ಉಳ್ಳಾಗಡ್ಡಿ, ಬಸವರಾಜ ಚಿಗಣ್ಣವರ, ವೀಣಾ ಬೂದಿಹಾಳ, ಈರಣ್ಣ ಹಡಪದ, ಪುಷ್ಪಾ ಉಕ್ಕಲಿ, ಮಂಜುನಾಥ ಮುಧೋಳ, ಅಶೋಕ ಚೂರಿ, ರಂಗನಾಥ ನಾಯಕ, ಹನುಮಂತ ಚಬ್ಬಿ, ವೆಂಕಪ್ಪ ಪುರದ ಸೇರಿದಂತೆ ಬಿಜೆಪಿ ವಿವಿಧ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಗ್ರೇಡ್ 2 ತಹಸೀಲ್ದಾರ್ ಕೆ. ರಾಧಾ ಮನವಿ ಸ್ವೀಕರಿಸಿದರು.