ಲೇಖಕ ರವಿ ಹಂಜ್ ರಚಿಸಿರುವ ಬಸವ ಮಂಟಪ ಕೃತಿಯನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿ, ಎಲ್ಲಿಯೂ ಬಿಡುಗಡೆಯಾಗದಂತೆ ತಡೆಹಿಡಿಯಬೇಕು. ಲೇಖಕ ರವಿ ಹಂಜ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಬಸವಣ್ಣನವರ ಕುರಿತು ವಿವಾದಾತ್ಮಕ ಕೃತಿ ರಚಿಸಿರುವ ರವಿ ಹಂಜ್ ಅವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು. ಮಹನೀಯರ ಜೀವನಗಾಥೆಯನ್ನು ತಿರುಚಿ ಅವಹೇಳನ ಮಾಡುವವರ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸುವಂತೆ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಸ್.ಆನಂದ್ ಸರ್ಕಾರವನ್ನು ಒತ್ತಾಯಿಸಿದರು.

ಹನ್ನೆರಡನೇ ಶತಮಾನದ ಮಹಾನ್ ಸಮಾಜ ಸುಧಾರಕರಾದ ಜಗಜ್ಯೋತಿ ಬಸವಣ್ಣನವರು ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಹಾಗೂ ಜಾತಿ ವ್ಯವಸ್ಥೆಯ ವಿರೋಧದ ಮೂಲಕ ಸಮಾಜಕ್ಕೆ ಹೊಸ ದಿಕ್ಕು ತೋರಿದ ಮಹಾನ್ ಶರಣರಾಗಿದ್ದಾರೆ. ಬಸವಣ್ಣನವರ ಜೀವನ, ವಚನ ಸಾಹಿತ್ಯ ಮತ್ತು ವಿಚಾರಧಾರೆಗಳ ಕುರಿತು ರವಿ ಹಂಜ್ ಬರೆದಿರುವ ಪುಸ್ತಕದಲ್ಲಿನ ಕೆಲವು ವಿಚಾರಗಳು ಆಕ್ಷೇಪಾರ್ಹವಾಗಿರುತ್ತವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಲೇಖಕ ರವಿ ಹಂಜ್ ರಚಿಸಿರುವ ಬಸವ ಮಂಟಪ ಕೃತಿಯನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿ, ಎಲ್ಲಿಯೂ ಬಿಡುಗಡೆಯಾಗದಂತೆ ತಡೆಹಿಡಿಯಬೇಕು. ಲೇಖಕ ರವಿ ಹಂಜ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಕೃತಿ ಬಿಡುಗಡೆ ಸಮಾರಂಭದಲ್ಲಿ ಸ್ವಾಮೀಜಿಯೊಬ್ಬರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರಬಿದರಿ ಅವರೂ ಸಹ ಪಾಲ್ಗೊಂಡಿದ್ದರು. ಬಸವಣ್ಣನವರ ಕುರಿತಾದ ಪುಸ್ತಕ ಹೊರತಂದಿರುವುದರಿಂದ ನಾವು ಭಾಗಿಯಾಗಿದ್ದೆವು. ಆದರೆ, ಅದರೊಳಗೆ ರವಿ ಹಂಜ್ ಅವರು ಬಸವಣ್ಣನವರ ಬಗ್ಗೆಯೇ ಆಕ್ಷೇಪಾರ್ಹ ಪದಗಳನ್ನು ಬರೆದಿರುವುದು ತಮಗೆ ತಿಳಿದಿರಲಿಲ್ಲ. ಅದನ್ನು ಓದಿದ ಕೆಲವರು ನಮಗೆ ತಿಳಿಸಿದ ನಂತರ ಆತನನ್ನು ಅತ್ಯಂತ ಕಠಿಣ ಪದಗಳಿಂದ ನಿಂದಿಸಿ, ನಾವು ಹೊರಬಂದಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಇದರಲ್ಲಿ ಅವರ ಪಾತ್ರವಿರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಈಗಾಗಲೇ ರಾಜ್ಯಾದ್ಯಂತ ರವಿ ಹಂಜ್ ವಿರುದ್ಧ ಹೋರಾಟಗಳು ನಡೆದಿವೆ ಮತ್ತು ನಡೆಯುತ್ತಲೇ ಇವೆ. ಇಂತಹ ಹೊತ್ತಿನಲ್ಲಿ ಆತನನ್ನು ಕೊಚ್ಚಿಯಲ್ಲಿ ದೇಶದಿಂದ ಪರಾರಿಯಾಗುತ್ತಿದ್ದ ವೇಳೆ ಪೊಲೀಸರು ಬಂಧಿಸಿರುವುದನ್ನು ಶ್ಲಾಘಿಸಿದರು.

ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಎಲ್ಲ ಮಹನೀಯರ ಬಗ್ಗೆಯೂ ಯಾವುದೇ ವ್ಯಕ್ತಿ ಅಪಮಾನ ಮಾಡುವುದು, ಆಕ್ಷೇಪಾರ್ಹವಾಗಿ ಲೇಖನ ಬರೆಯುವುದನ್ನು ಖಂಡನೀಯ. ಅಂತಹ ಲೇಖಕರಿಗೆ ಕಠಿಣ ಶಿಕ್ಷೆ ವಿಧಿಸಿದಾಗ ಮಾತ್ರ ಆಕ್ಷೇಪಾರ್ಹ ಲೇಖನಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಮಹಾಸಭಾದ ಮುಖಂಡರಾದ ಗುಳ್ಳಪ್ಪ, ಕೆ.ಎಸ್. ಷಡಕ್ಷರಿ, ಪರಮೇಶ್, ನಾಗರಾಜು, ಶಶಿಕುಮಾರ್, ಸುರೇಂದ್ರಕುಮಾರ್ ಗೋಷ್ಠಿಯಲ್ಲಿದ್ದರು.