ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಿಧಾನ ಸಭಾ ಅಧಿವೇಶನದಲ್ಲಿ ಜಮೀನು ದಾರಿ ವಿಷಯವನ್ನು ಚರ್ಚಿಸಿ ಸೂಕ್ತ ಕಾನೂನು ತಿದ್ದುಪಡಿ ಮಾಡಿ ತಹಸೀಲ್ದಾರುಗಳಿಗೆ ದಾರಿ ಮಾಡಿಕೊಡಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದ ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗಲು ಮುಂದಿನ ರೈತರು ದಾರಿ ಕೊಡದ ಕಾರಣ ಜಮೀನು ಬಿತ್ತನೆ ಮಾಡದೆ. ಜಮೀನು ಬೀಳು ಬಿದ್ದು ರೈತ ಕುಟುಂಬಗಳು ಉಪವಾಸ ಬೀಳುವ ಪರಸ್ಥಿತಿ ನಿರ್ಮಾಣವಾಗಿದೆ. ಈ ವಿಷಯವಾಗಿ ಕಳೆದ ೧೦ ವರ್ಷಗಳಿಂದ ಹೋರಾಟ ಮಾಡಿ ಸರ್ಕಾರ ಗಮನ ಸೆಳೆಯಲಾಗಿತ್ತು. ನಂತರ ಸರ್ಕಾರ ಕಾಟಾಚಾರಕ್ಕೆ ಎಂಬಂತೆ ಸುತ್ತೋಲೆ ಹೊರಡಿಸಿದೆ. ಆದರೆ ರಾಜ್ಯದ ಯಾವೊಬ್ಬ ತಹಸೀಲ್ದಾರಗಳು ದಾರಿ ಮಾಡಿಕೊಟ್ಟ ಉದಾಹರಣೆ ಇಲ್ಲ. ತಹಸೀಲ್ದಾರಗಳನ್ನು ಕೇಳಿದರೆ ಸರ್ಕಾರದ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ದಾರಿ ಮಾಡಿಕೊಡಲು ಆದೇಶವಿಲ್ಲ. ಆದ್ದರಿಂದ ಮಾಡಿಕೊಡಲು ಸಾಧ್ಯವಿಲ್ಲವೆಂದು ರೈತರಿಗೆ ಹೇಳುತಿದ್ದಾರೆ. ಇದರಿಂದ ಸರ್ಕಾರದ ಸುತ್ತೋಲೆಗೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜುಲೈ ೧೫ ರಂದು ಪ್ರಾರಂಭವಾಗಲಿರುವ ವಿಧಾನ ಸಭಾ ಅಧಿವೇಶನದಲ್ಲಿ ಜಮೀನು ದಾರಿ ವಿಷಯವನ್ನು ಚರ್ಚಿಸಿ ಸೂಕ್ತ ಕಾನೂನು ತಿದ್ದುಪಡಿ ಮಾಡಿ ತಹಸೀಲ್ದಾರುಗಳಿಗೆ ದಾರಿ ಮಾಡಿಕೊಡುವ ಅಧಿಕಾರವನ್ನು ವಹಿಸಿಕೊಡಬೇಕು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಕಾನೂನು ತಿದ್ದುಪಡಿ ಮಾಡಬೇಕು. ಕರ್ನಾಟಕ ವಿಧಾನಸಭೆ ಅರ್ಜಿಗಳ ಸಮೀತಿ ಈ ಗಂಭೀರ ಸಮಸ್ಯೆಯನ್ನು ಅಧಿವೇಶನದಲ್ಲಿ ಚರ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ವೇಳೆ ರೈತ ಮುಖಂಡರಾದ ಚನ್ನಬಸಪ್ಪ ಸಿಂಧೂರ, ದಾವಲಸಾಬ ನದಾಫ್, ವಿಠ್ಠಲ ಬಿರಾದಾರ, ಸಿದ್ದಪ್ಪ ಕಲಬಿಳಗಿ, ಪ್ರಭು ಬಸ್ತವಾಡ, ಗಿರಿಮಲ್ಲಪ್ಪ ದೊಡಮನಿ, ಶೇಖಪ್ಪ ಖರಾಬಿ, ಶರಣಪ್ಪ ಹಿಪ್ಪರಗಿ, ಶ್ರೀಕಾಂತ ಹಾದಿಮನಿ, ಈರಣ್ಣ ಶಿರಸಂಗಿ, ಶಿವಪ್ಪ ಸುಂಟ್ಯಾನ, ಹನಮಂತ ಮುರಾಳ, ಶಿವಪ್ಪ ಮುರಾಳ ಮುಂತಾದವರು ಇದ್ದರು.