ಕನ್ನಡಪ್ರಭ ವಾರ್ತೆ ಮೈಸೂರು
ವಾಲ್ಮೀಕಿ ನಿಗಮದ ಲೂಟಿ ಆರೋಪ ಹೊತ್ತಿರುವ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಆಹೋರಾತ್ರಿ ಧರಣಿ ಆರಂಭಿಸಿದರು.ಸಚಿವ ಬಿ.ನಾಗೇಂದ್ರ ಕೂಡಲೇ ರಾಜೀನಾಮೆ ನೀಡಬೇಕು, ಶೇಮ್ ಶೇಮ್ ಕಾಂಗ್ರೆಸ್ ಶೇಮ್ ಶೇಮ್, ತೂ ಚೀ ಕಾಂಗ್ರೆಸ್, ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ ಮಾತನಾಡಿ, ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದ ಬಿ. ನಾಗೇಂದ್ರ ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ 189 ಕೋಟಿ ರು. ಲೂಟಿ ಮಾಡಿ ಆಂಧ್ರದ ಬ್ಯಾಂಕಿಗೆ, ಚಿನ್ನದ ಅಂಗಡಿಗಳಿಗೆ ಹಾಗೂ ವೈನ್ ಸ್ಟೋರ್ ಗಳಿಗೆ ವರ್ಗಾವಣೆ ಮಾಡಿ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.ಸ್ವತಃ ಸಿದ್ದರಾಮಯ್ಯ ಅವರು 180 ಕೋಟಿ ಅಲ್ಲ 89 ಕೋಟಿ ರು. ದುರ್ಬಳಕೆ ಆಗಿದೆ ಎಂದು ಒಪ್ಪಿಕೊಂಡಿದ್ದರು. ಅದಾದರ ಬಿಜೆಪಿಯ ಹೋರಾಟದ ಫಲದಿಂದ ಬಿ. ನಾಗೇಂದ್ರ ರಾಜೀನಾಮೆ ನೀಡಿ, ಜೈಲಿಗೆ ಹೋಗಿದ್ದರು. ಜೈಲಿನಿಂದ ಬೇಲ್ ಮೂಲಕ ಹೊರ ಬಂದಿರುವ ಬಿ.ನಾಗೇಂಗ್ರ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಯಾವುದೇ ಕಾರಣಕ್ಕೂ ಬಿ.ನಾಗೇಂದ್ರ ಅವರನ್ನು ಸಚಿವ ಸ್ಥಾನ ನೀಡಬಾರದು. ಅವರನ್ನು ಸಂಪುಟದಿಂದ ಹೊರಗಿಡಬೇಕು ಎಂದು ಒತ್ತಾಯಿಸಿದರು.
ಡಿ.ಕೆ.ಶಿವಕುಮಾರ್ ಅವರು ಯಾವ ಒತ್ತಡಕ್ಕೆ ಮಣಿಯುತ್ತಿದ್ದಾರೆ ಗೊತ್ತಿಲ್ಲ. ಹೈಕಮಾಂಡ್ ಒತ್ತಡವಿದೆಯೋ ಅಥವಾ ಯಾರಾದರೂ ಹೆದರಿಸುತ್ತಿದ್ದಾರೋ ಗೊತ್ತಿಲ್ಲ. ಯಾವ ಕಾರಣಕ್ಕೆ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಂಡಿದ್ದಾರೆ ಎಂದು ಸ್ಪಷ್ಟತೆ ನೀಡಬೇಕು. ಕಾಂಗ್ರೆಸ್ ನ ಹಲವು ಹಿರಿಯ ನಾಯಕರು ಕಣ್ಣೀರು ಹಾಕುತ್ತಿದ್ದಾರೆ. ಅವರಿಗೆ ಮಂತ್ರಿಗಿರಿ ಕೊಡಲಿಲ್ಲ. ಮೈಸೂರಿನ ತನ್ವೀರ್ ಸೇಠ್ ಅತ್ಯಂತ ಪ್ರಾಮಾಣಿಕ ನಾಯಕ. ಅಂತಹ ವ್ಯಕ್ತಿಗಳಿಗೆ ಕೊಡದೆ ಕಳ್ಳ ಎಂದು ಸಾಬೀತಾಗಿರುವ ವ್ಯಕ್ತಿಗೆ ಮಂತ್ರಿಗಿರಿ ಕೊಡಲು ಸಿಎಂ ಇಚ್ಛೆಪಟ್ಟಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣವನ್ನು ಲೂಟಿ ಮಾಡಿ, ಬಳ್ಳಾರಿ ಮತ್ತು ರಾಯಚೂರು ಲೋಕಸಭಾ ಚುನಾವಣೆಯಲ್ಲಿ ದುರ್ಬಳಕೆ ಮಾಡಿದ್ದ ಕಾರಣಕ್ಕೆ ರಾಜೀನಾಮೆ ನೀಡಿ ಜೈಲಿಗೆ ಹೋಗಿ ಬಂದಿರುವ ಬಿ.ನಾಗೇಂದ್ರ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಬಿ. ನಾಗೇಂದ್ರ ಅವರು ರಾಜೀನಾಮೆ ನೀಡುವವರೆಗೂ ಅಹೋರಾತ್ರಿ ಧರಣಿ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಮಾಜಿ ಶಾಸಕ ಬಿ. ಹರ್ಷವರ್ದನ್, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಬಿ.ಎಚ್. ಮಂಜುನಾಥ್, ದಿನೇಶ್ ಗೌಡ, ರಾಮಕೃಷ್ಣ, ಅನಿಲ್ ಥಾಮಸ್, ಎಸ್. ಮಹದೇವಯ್ಯ, ಡಾ.ಈ.ಸಿ.ನಿಂಗರಾಜ್ ಗೌಡ, ರಘು, ಮಹೇಶ್ ರಾಜೇ ಅರಸ್, ರಾಕೇಶ್ ಗೌಡ ಮೊದಲಾದವರು ಇದ್ದರು.ಅಧಿಕ ಪ್ರಸಂಗಿ ತರ ಮಾತನಾಡಬೇಡಿ- ಯತೀಂದ್ರಗೆ ಪ್ರತಾಪ್ ಸಿಂಹ ತಿರುಗೇಟು
ಆರ್‌ಎಸ್ಎಸ್ ವಿಷ ಸರ್ಪ ಎಂಬ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ, ಅಪ್ಪನ ಕೋಟಾ, ಜಾತಿ ಕೋಟಾದಲ್ಲಿ ಮಂತ್ರಿ ಸ್ಥಾನ ತೆಗೆದುಕೊಂಡಿದ್ದಾರೆ. ಮೈಸೂರಿನಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ. ದಸರಾ ಸಮೀಪಿಸುತ್ತಿದೆ, ಆ ಕಡೆ ಗಮನ ಕೊಡಿ. ಅಲ್ಲಿ ಪ್ರಿಯಾಂಕ್ ಖರ್ಗೆ ಅಧಿಕ ಪ್ರಸಂಗಿ ರೀತಿ ಮಾತನಾಡ್ತಾರೆ. ಇಲ್ಲಿ ನೀವು ಅಧಿಕ ಪ್ರಸಂಗಿ ತರ ಮಾತನಾಡಬೇಡಿ ಎಂದು ತಿರುಗೇಟು ನೀಡಿದರು.