ಹಾವೇರಿ: ರಾಜ್ಯ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ, ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಕೆಲಸದಿಂದ ತೆಗೆಯುವ ನೀತಿ ಕೈಬಿಡಲು ಆಗ್ರಹಿಸಿ ಹಾಗೂ ಮುಖ್ಯಮಂತ್ರಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ಜಿಲ್ಲಾ ಸಮಿತಿಯಿಂದ ಶುಕ್ರವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಮಾಡಲಾಯಿತು. ಈ ವೇಳೆ ಸಂಘಟನೆ ಕಾರ್ಯಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಕಳೆದ 2025ರ ಜನವರಿ ನಡೆದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟದ ಸಂದರ್ಭದಲ್ಲಿ ಮಾಸಿಕ ಗ್ಯಾರಂಟಿ ಕನಿಷ್ಠ 10 ಸಾವಿರ ರು. ಭರವಸೆ ನೀಡಿದ್ದು ಇಲ್ಲಿಯವರೆಗೆ ಆದೇಶ ಆಗಿಲ್ಲ. ಹಾಗೆಯೇ 2025 ಮಾರ್ಚ್ ಬಜೆಟ್‌ನಲ್ಲಿ ರಾಜ್ಯ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ 1 ಸಾವಿರ ರು. ಹೆಚ್ಚಳ ಮಾಡಿದ್ದು, ಆದರೆ ಆಶಾ ಕಾರ್ಯಕರ್ತೆಯರಿಗೆ ಮಾತ್ರ ಹೆಚ್ಚಳ ಮಾಡಿಲ್ಲ. ಆಡಳಿತರೂಢ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಈಗಿರುವ 5 ಸಾವಿರ ರು. ಗೌರವಧನವನ್ನು 8 ಸಾವಿರಕ್ಕೆ ಹೆಚ್ಚಳ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈವರೆಗೂ ಭರವಸೆ ಕೊಟ್ಟಂತೆ ಹೆಚ್ಚಳದ ಆದೇಶ ಮಾಡಿಲ್ಲ ಎಂದು ದೂರಿದರು. ತರ್ಕಬದ್ಧಗೊಳಿಸುವ ಹೆಸರಿನಲ್ಲಿ 7000 ಕಾರ್ಯಕರ್ತೆಯರನ್ನು ಕೈಬಿಡುವುದಾಗಿ ಹೊರಡಿಸಿರುವ ಆದೇಶ, ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಉಲ್ಲಂಘನೆ ಆಗಿದೆ. ಹಾಗೆಯೇ ಕೈಬಿಟ್ಟ ಆಶಾಗಳಿಗೆ ಹೊರ ಗುತ್ತಿಗೆ ಗ್ರೂಪ್ ''''''''ಡಿ'''''''' ನೌಕರಿ ಕೆಲಸ ನೀಡುವುದಾಗಿ ತಿಳಿಸಿ, ಬಹುತೇಕ ಆಶಾಗಳನ್ನು ಕೈಬಿಡುವ ಪಿತೂರಿ ನಡೆದಿದೆ. ಕಳೆದ ವರ್ಷ ಆಶಾ ಸುಗಮಕಾರರನ್ನು ಕೈ ಬಿಟ್ಟಿರುವುದು ಕೇಂದ್ರದ ಮಾರ್ಗಸೂಚಿಗೆ ವಿರುದ್ಧವಾಗಿದ್ದು, ಭರವಸೆ ನೀಡಿದಂತೆ ಮರುನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷೆ ಜಯಶೀಲಾ ಎಸ್. ಬಿ ಮಾತನಾಡಿ, ಹಲವಾರು ತಿಂಗಳುಗಳಿಂದ ಜಿಲ್ಲಾ ಮಟ್ಟದ ಸಮಸ್ಯೆಗಳನ್ನು ಪರಿಹರಿಸಲು ನನೆಗುದಿಗೆ ಬಿದ್ದಿರುವ ಕುಂದುಕೊರತೆ ಸಭೆ ಕೂಡಲೇ ಕರೆಯಬೇಕು. ಸಮಸ್ಯೆಗಳನ್ನು ಬಗೆಹರಿಸಬೇಕು. ಇಂದು ರಾಜ್ಯವ್ಯಾಪಿ ಹೋರಾಟಕ್ಕೆ ಮುಂದಾಗಿ ನೀಡಿದ ಭರವಸೆಯಂತೆ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಉಗ್ರ ಹೋರಾಟವನ್ನು ಕೈಗೊಳ್ಳುವುದಾಗಿ ಎಚ್ಚರಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪುನೀತ್, ಮಾ.6ರಂದು ಕುಂದುಕೊರತೆ ಸಭೆ ನಿಗದಿ ಮಾಡಿದ ಆದೇಶವನ್ನು ಸ್ಥಳದಲ್ಲಿಯೇ ನೀಡಿದ್ದರಿಂದ ಪ್ರತಿಭಟನೆ ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ಮಂಜುಳಾ ಮಸೂರ, ಪುಷ್ಪಾ ಮಾಡ್ಲೂರಮಠ, ಗೀತಾ ಮಡಿವಾಳ, ರೇಖಾ ಕರಿಗಾರ, ನೀಲಾ ಕಳ್ಳಿಮನಿ, ಮಂಜುಳಾ ಕಾರಡಗಿ, ಮಲ್ಲಮ್ಮ ಚಕ್ರಸಾಲಿ, ರೇಖಾ ಪಟ್ಟಣಶೆಟ್ಟಿ, ವಿನೋದಾ ಹೊಂಡದ ಸೇರಿದಂತೆ ನೂರಾರು ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು.