ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದನ್ವಯ ಆಡಳಿತಾವಧಿ ಮುಗಿಯುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಸರ್ಕಾರ ಆಯಾ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.
ಬಳ್ಳಾರಿ: ರಾಜ್ಯದ ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಜನವರಿಯಿಂದ ಮಾರ್ಚ್‌ನೊಳಗೆ ಪೂರ್ಣಗೊಳ್ಳುತ್ತಿದ್ದು, ರಾಜ್ಯ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಿಸುವ ಬದಲು ಹಾಲಿ ಪಂಚಾಯಿತಿ ಆಡಳಿತ ಸಮಿತಿಗೆ 6 ತಿಂಗಳ ವರೆಗೆ ಸೇವಾಧಿಕಾರ ವಿಸ್ತರಣೆಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟ ಆಗ್ರಹಿಸಿದೆ.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಣಾಪುರ ನಾಗರಾಜ್ ಹಾಗೂ ಸಂಘಟನೆಯ ರಾಜ್ಯ ಖಜಾಂಚಿ ಹೇಮಾ ಮಂಜುನಾಥ್ ಸರ್ಕಾರ ಆಡಳಿತಾಧಿಕಾರಿಗಳ ನೇಮಕಕ್ಕೆ ಮುಂದಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದನ್ವಯ ಆಡಳಿತಾವಧಿ ಮುಗಿಯುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಸರ್ಕಾರ ಆಯಾ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಬದಲು ಅಧಿಕಾರಿಗಳ ಕೈಗೆ ಪಂಚಾಯಿತಿ ವ್ಯವಸ್ಥೆಯನ್ನಿಡುವ ಅತ್ಯಂತ ಅವೈಜ್ಞಾನಿಕ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯಿತಿ ರಾಜ್ ಅಧಿನಿಯಮ 1933ರ ಪ್ರಕರಣ 8(1) ಬಿ( i) ಅನ್ವಯ ಚುನಾಯಿತರಾಗಲು ಅರ್ಹರಾದ ವ್ಯಕ್ತಿಗಳನ್ನೊಳಗೊಂಡ ಆಡಳಿತ ಸಮಿತಿ ನೇಮಕ ಮಾಡಲು ಅವಕಾಶವಿದೆ. ಈ ಹಿಂದೆ ಜೆ.ಎಚ್. ಪಾಟೀಲ್ ಮುಖ್ಯಮಂತ್ರಿ, ಎಂ.ಪಿ. ಪ್ರಕಾಶ್ ಪಂಚಾಯತ್ ರಾಜ್ ಸಚಿವರಾಗಿದ್ದಾಗ ಪಂಚಾಯಿತಿಯ ಆಡಳಿತ ಅವಧಿಯನ್ನು 6 ತಿಂಗಳು ಕಾಲ ವಿಸ್ತರಿಸುವ ಜನಪರವಾದ ನಿಲುವು ಕೈಗೊಂಡರು.ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಜನಾಸಕ್ತಿಯ ನಿರ್ಧಾರ ಕೈಗೊಳ್ಳದೇ ಅಧಿಕಾರಿಗಳ ಹಿಡಿತದಲ್ಲಿ ಪಂಚಾಯಿತಿಗಳನ್ನು ನೀಡಲು ಮುಂದಾಗಿದ್ದಾರೆ. 2020ರಲ್ಲಿ ಸಿದ್ದರಾಮಯ್ಯ ಪ್ರತಿಪಕ್ಷದಲ್ಲಿದ್ದ ವೇಳೆ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸದೆ, ಇರುವ ಹಾಲಿ ಆಡಳಿತ ಸಮಿತಿಗೆ 6 ತಿಂಗಳ ಕಾಲ ಸೇವಾಧಿಕಾರ ನೀಡಬೇಕು ಎಂದು ಸುದ್ದಿಗೋಷ್ಠಿ ನಡೆಸಿ ಆಡಳಿತಾರೂಢ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ಈಗ ರಾಜ್ಯದಲ್ಲಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದು, ಪಂಚಾಯಿತಿಗಳಿಗೆ ಆಡಳಿತ ಅಧಿಕಾರಿ ನೇಮಿಸುವ ಸಂಬಂಧ ನಿರ್ಧಾರ ಕೈಗೊಂಡು, ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಇದು ಯಾವ ನೀತಿ ಎಂದು ಪ್ರಶ್ನಿಸಿದರು.
ಇದೇ ವಿಚಾರವಾಗಿ ಜ.21ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಒಕ್ಕೂಟದ ಬೇಡಿಕೆಯಂತೆಯೇ ಅವಧಿ ವಿಸ್ತರಣೆಯ ನಿರ್ಧಾರ ಪ್ರಕಟಿಸಬೇಕು. ಇಲ್ಲದೇ ಹೋದರೆ ಹೋರಾಟದ ಜೊತೆಗೆ ನ್ಯಾಯಾಲಯದ ಮೊರೆ ಹೋಗುವ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಶ್ರೀಧರ್, ಹಂದಿಹಾಳು ಗ್ರಾಪಂ ಅಧ್ಯಕ್ಷ ಯು.ಗಣೇಶ್, ಲಕ್ಷ್ಮೀ ರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.