ಅಮಿತ್ ಶಾ ಮೇಲೆ ದೇಶದ್ರೋಹ ಕೇಸ್ ದಾಖಲಿಸಲು ಆಗ್ರಹ

| Published : Dec 21 2024, 01:15 AM IST

ಸಾರಾಂಶ

ಡಾ. ಬಿ.ಆರ್. ಅಂಬೇಡ್ಕರ್‌ ಅವರನ್ನು ಅವಮಾನಿಸುವ ಹೇಳಿಕೆ ನೀಡಿದ ಕೇಂದ್ರ ಸಚಿವ ಅಮಿತ್ ಶಾ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಸವಣೂರಲ್ಲಿ ವಿವಿಧ ದಲಿತ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.

ಸವಣೂರು: ಡಾ. ಬಿ.ಆರ್. ಅಂಬೇಡ್ಕರ್‌ ಅವರನ್ನು ಅವಮಾನಿಸುವ ಹೇಳಿಕೆ ನೀಡಿದ ಕೇಂದ್ರ ಸಚಿವ ಅಮಿತ್ ಶಾ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ವಿವಿಧ ದಲಿತ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.

ಇಲ್ಲಿಯ ತಹಸೀಲ್ದಾರ್‌ ಕಚೇರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.

ಅಂಬೇಡ್ಕರ್‌, ಅಂಬೇಡ್ಕರ್‌, ಅಂಬೇಡ್ಕರ್‌ ಎಂದು ಹೇಳುವುದು ಫ್ಯಾಶನ್ ಆಗಿಬಿಟ್ಟಿದೆ, ಅದರ ಬದಲಿ ದೇವರ ಜಪ ಮಾಡಿದರೆ ಸ್ವರ್ಗ ಸಿಗುತ್ತದೆ ಎಂದು ಕೇಂದ್ರ ಅಧಿವೇಶನದಲ್ಲಿ ಅಮಿತ್ ಶಾ ಹೇಳಿದ್ದಾರೆ. ಅದು ಅವಿವೇಕದ ಹೇಳಿಕೆಯಾಗಿದ್ದು, ಅವರನ್ನು ಗೃಹಸಚಿವ ಸ್ಥಾನದಿಂದ ವಜಾ ಮಾಡಬೇಕು, ಅವರ ಮೇಲೆ ಅಟ್ರಾಸಿಟಿ ಕೇಸ್ ಹಾಕಬೇಕು ಎಂದು ಆಗ್ರಹಿಸಿದರು.

ಡಾ. ಬಾಬಾಸಾಹೇಬ್ ಅಂಬೇಡ್ಕರ್‌ ದೇಶಕ್ಕೆ ದಿಕ್ಕು ತೋರಿಸಿದ ಮಹಾನ ವ್ಯಕ್ತಿ. ಅವರ ಅವಮಾನವನ್ನು ದೇಶದಲ್ಲಿರುವ ದಲಿತ ಸಮುದಾಯದವರು ಸಹಿಸುವುದಿಲ್ಲ. ಆದ್ದರಿಂದ ರಾಷ್ಟ್ರಪತಿಯವರು ಕೂಡಲೆ ಅಮಿತ ಶಾ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ತಹಸೀಲ್ದಾರ್‌ ಇಲಾಖೆಯ ಶಿರಸ್ತೇದಾರ್‌ ತ್ರಿವೇಣಿ ನೀರಲಕಟ್ಟಿ ಮನವಿ ಸ್ವೀಕರಿಸಿದರು. ಲಕ್ಷ್ಮಣ ಕನವಳ್ಳಿ, ಗಂಗಪ್ಪ ಹರಿಜನ, ಆನಂದ ವಡಕ್ಕಮ್ಮನವರ, ನಾಗರಾಜ ಹರಿಜನ, ರಾಘವೇಂದ್ರ ಬಾಲೇಹೊಸೂರ, ಸುರೇಶ ತಳವಾರ, ಮಂಜುನಾಥ ಮೆಳ್ಳಳ್ಳಿ, ಮುತ್ತು ಲಕ್ಷ್ಮೇಶ್ವರ, ಲಕ್ಷ್ಮಣ ಮುಗಳಿ, ರಾಜು ಮರಗಪ್ಪನವರ, ಶಂಕರ ಮರಗಪ್ಪನವರ, ದ್ಯಾಮಣ್ಣ ಪೂಜಾರ, ಎಂ.ಆರ್. ಮೈಲಮ್ಮನವರ, ಮನೋಜ ದೊಡ್ಮನಿ ಹಾಗೂ ದಲಿತ ಮುಖಂಡರು ಇದ್ದರು.