ಕಾಲುವೆಗಳ ಮೂಲಕ ಕೆರೆ ತುಂಬಿಸಲು ಆಗ್ರಹ

| Published : Jan 22 2024, 02:18 AM IST

ಸಾರಾಂಶ

ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಅಖಂಡ ವಿಜಯಪುರ ಜಿಲ್ಲೆಯ ಜನರ ಕುಡಿಯುವ ನೀರಿಗಾಗಿ ಕಾಲುವೆಗಳ ಮೂಲಕ ಕೆರೆ ತುಂಬಿಸಬೇಕು ಎಂದು ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ನಿಂಗರಾಜ ಆಲೂರ ಹೇಳಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಅಖಂಡ ವಿಜಯಪುರ ಜಿಲ್ಲೆಯ ಜನರ ಕುಡಿಯುವ ನೀರಿಗಾಗಿ ಕಾಲುವೆಗಳ ಮೂಲಕ ಕೆರೆ ತುಂಬಿಸಬೇಕು ಎಂದು ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ನಿಂಗರಾಜ ಆಲೂರ ಹೇಳಿದರು.

ಆಲಮಟ್ಟಿಯಲ್ಲಿರುವ ಶ್ರೀರಾಮಲಿಂಗೇಶ್ವರ ದೇವಸ್ಥಾನದಿಂದ ಪಾದಯಾತ್ರೆಯಲ್ಲಿ ಶನಿವಾರ ಎಸ್‌ಬಿಐ ಬ್ಯಾಂಕ್ ಮಾರ್ಗವಾಗಿ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರರ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಲಕ್ಷಾಂತರ ಎಕರೆ ಜಮೀನು, ನೂರಾರು ಊರುಗಳು ಮುಳುಗಡೆಯಾಗಿ ಲಕ್ಷಾಂತರ ಕುಟುಂಬಗಳು ಸಂತ್ರಸ್ಥರಾಗಿರುವ ಜಿಲ್ಲೆಯ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವಂತೆ ಮಾಡಲು ಅಧಿಕಾರಿಗಳು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ರಾಜ್ಯದಲ್ಲಿ ಮುಂಗಾರು-ಹಿಂಗಾರು ಮಳೆಗಳು ಸಮರ್ಪಕವಾಗಿ ಸುರಿಯದಿದ್ದರೂ ಕೃಷ್ಣೆಯ ಉಗಮಸ್ಥಾನ ಮಹಾಬಲೇಶ್ವರ ಮತ್ತು ಕೃಷ್ಣೆಯ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಮಳೆಯಾಗಿದ್ದರಿಂದ ಕೃಷ್ಣೆಗೆ ನೀರು ಹರಿದುಬಂದು ಜನತೆಯ ದಾಹ ನೀಗಿಸುವಂತಾಗಿದೆ ಎಂದರು.

ಬರದ ಜಿಲ್ಲೆಯೆಂದೇ ಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಜಲಾಶಯ ನಿರ್ಮಿಸಿ ನೂರಾರು ಟಿಎಂಸಿ ನೀರು ಸಂಗ್ರಹ ಮಾಡಿಕೊಂಡಿದ್ದರೂ ಜಿಲ್ಲೆಯ ಜನರಿಗೆ ನೀರು ಕೊಡಲು ಮಾತ್ರ ಮೀನ-ಮೇಷ ಎಣಿಸುವುದೇಕೆ? ಆಲಮಟ್ಟಿ ಜಲಾಶಯದ ಸಹೋದರ ಜಲಾಶಯವಾಗಿರುವ ಬಸವಸಾಗರ ಜಲಾಶಯ ವ್ಯಾಪ್ತಿಯ ರೈತರು ನೀರು ಕೇಳಿದಾಗ ನೀರು ಕೊಡುವ ನೀವುಗಳು ಆಲಮಟ್ಟಿ ಜಲಾಶಯ ವ್ಯಾಪ್ತಿಯ ಜಿಲ್ಲೆಯ ಜನರಿಗೆ ನೀರು ಕೊಡಲು ಸಬೂಬು ಹೇಳುವುದಾದರೂ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪಮುಖ್ಯ ಅಭಿಯಂತರ ಸುರೇಶ ಅವರಿಗೆ ರೈತ ಸಂಘಟನೆಯ ಪದಾಧಿಕಾರಿಗಳು ಆಲಮಟ್ಟಿ ಜಲಾಶಯ ವ್ಯಾಪ್ತಿಯ ಎಲ್ಲ ಕೆರೆಗಳನ್ನು ತುಂಬಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಉಪಮುಖ್ಯ ಅಭಿಯಂತರರು ಇತ್ತೀಚೆಗಷ್ಟೇ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸಲಾಗಿದೆ ಎಂದರು.

ಇದಕ್ಕೆ ಆಕ್ರೋಶಗೊಂಡ ರೈತರು ನಮ್ಮೊಂದಿಗೆ ನಡೆಯಿರಿ. ಕಿರಿಶ್ಯಾಳ, ಶೀಕಳವಾಡಿ ಕೆರೆಗಳು ಸೇರಿದಂತೆ ಅವಳಿ ಜಿಲ್ಲೆಯ ಬಹುತೇಕ ಕೆರೆಗಳು ಖಾಲಿಯಾಗುತ್ತಿವೆ ಎಂದು ಅಧಿಕಾರಿಯನ್ನು ತರಾಟೆಗೆಗ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಅಧಿಕಾರಿಗಳಾದ ಸಹಾಯಕ ಕಾರ್ಯಪಾಲಕ ಅಭಿಯಂತರುಗಳಾದ ಐ.ಎಲ್.ಕಳಸಾ, ಹೆರೂರ ಮಠ ಹಾಗೂ ರೈತ ಮುಖಂಡಡರುಗಳಾದ ನಿಡಗುಂದಿ ತಾಲೂಕು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಸೀತಪ್ಪ ಗಣಿ, ಸಾಬಣ್ಣ ಅಂಗಡಿ, ವೆಂಕಟೇಶ ವಡ್ಡರ, ರವಿಶಂಕರ ಕೋತಿನ್, ರಮೆಶ ವಡ್ಡರ, ಪೀರಸಾಬ್‌ ನದಾಫ, ಶಶಿಕಾಂತ ಪಾಟೀಲ, ರಾಯವ್ವ ಮೇಟಿ, ಪಾರುಬಾಯಿ ಲಮಾಣಿ, ಶಾಂತವ್ವ ಮಡಿವಾಳರ, ಸುಭಾಸ ಚೋಪಡೆ, ಸಂಗಮೇಶ ಹೊನಕಟ್ಟಿ ಮೊದಲಾದವರಿದ್ದರು.