ಪ್ರಸಕ್ತ ಸಾಲಿನ ಕಬ್ಬು ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ 5,500 ರು. ಬೆಲೆ ನಿಗಧಿಪಡಿಸಬೇಕು ಹಾಗೂ ಮುಂಗಡವಾಗಿ 4,000 ರು. ಪಾವತಿಸಬೇಕು ಎಂದು ಆಗ್ರಹಿಸಿ ರೈತ ಸಂಘಗಳ ಸಮನ್ವಯ ಸಮಿತಿಯಿಂದ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್

ಪ್ರಸಕ್ತ ಸಾಲಿನ ಕಬ್ಬು ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ 5,500 ರು. ಬೆಲೆ ನಿಗಧಿಪಡಿಸಬೇಕು ಹಾಗೂ ಮುಂಗಡವಾಗಿ 4,000 ರು. ಪಾವತಿಸಬೇಕು ಎಂದು ಆಗ್ರಹಿಸಿ ರೈತ ಸಂಘಗಳ ಸಮನ್ವಯ ಸಮಿತಿಯಿಂದ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಬೀದರ್ ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೇರವಣಿಗೆ ಆರಂಭಿಸಿ ಭಗತಸಿಂಗ ವೃತ್ತ, ಬಸವೇಶ್ವರ ವೃತ್ತದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಎದುರಿಗೆ ತಲುಪಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ರೈತರ ಹಕ್ಕುಗಳನ್ನು ರಕ್ಷಿಸುವಂತೆ ಒತ್ತಾಯಿಸಿ ಈ ಹೋರಾಟ ಹಮ್ಮಿಕೊಂಡಿದ್ದು, ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಸಂಸತ್ತಿನಲ್ಲಿ ಕಾಯ್ದೆ ರೂಪಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

2026ನೇ ಸಾಲಿನ ಕಬ್ಬು ಹಂಗಾಮಿಗೆ ಪ್ರತಿ ಟನ್‌ಗೆ 5,500 ರು. ದರ ನಿಗದಿಪಡಿಸಬೇಕು. ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ 4,000 ರು. ಮುಂಗಡ ಹಣ ಪಾವತಿಸಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಏಕರೂಪವಾಗಿ ಕಬ್ಬಿನ ಬೆಲೆ ಜಾರಿಗೊಳಿಸಬೇಕು.

ಕೇಂದ್ರ ಸರ್ಕಾರ ನಿಗದಿಪಡಿಸಿರುವ ಪ್ರತಿ ಟನ್‌ಗೆ 3,650 ರು. ಎಫ್‌ಆರ್‌ಪಿ ದರ ಅವೈಜ್ಞಾನಿಕವಾಗಿದ್ದು, ರೈತರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನು ಜಾರಿಗೊಳಿಸಬೇಕು. ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಸಂಘಟನೆಗಳ ನಡುವೆ ಕಬ್ಬಿನ ಬೆಲೆ ನಿಗದಿ ಕುರಿತು ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ. ಧರಣಿ ಆರಂಭವಾದ ಐದು ದಿನಗಳ ಒಳಗಾಗಿ ಪ್ರತಿ ಟನ್‌ಗೆ 4,000 ರು. ಮುಂಗಡ ಹಣ ಘೋಷಣೆ ಮಾಡದಿದ್ದರೆ ಬೀದರ್ ಜಿಲ್ಲೆಯಾದ್ಯಂತ ರಸ್ತೆ ತಡೆ ಚಳವಳಿ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಹೋರಾಟದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಸುಧಾಕರ ನಿರ್ಣಾ, ಮಲ್ಲಾರೆಡ್ಡಿ ಮುರಾಳ, ಬಸವರಾಜ ಸ್ವಾಮಿ, ಕಾ.ಬಾಬುರಾವ ಹೊನ್ನಾ, ಗುಂಡುರೆಡ್ಡಿ, ಧೂಳಪ್ಪ ಆಣದೂರ, ಮಲ್ಲಿಕಾರ್ಜುನ ಬಿರಾದಾರ, ಹುಲೆಪ್ಪ ಹುಣಜಿ, ಅಶೋಕ ಕಾರಭಾರಿ, ಪಂಡರಿ ಮೇತ್ರೆ, ಸುಕೇಶ ರೆಡ್ಡಿ, ಜೈರಾಜ ಕೊಳ್ಳಾ, ಕಿರಣ ಖಂಡ್ರೆ, ಕೆ.ಡಿ.ಗಣೇಶ, ಖಾಸಿಂ ಅಲಿ, ಸುಭಾಷ ಮಾಶೆಟ್ಟಿ, ಓಂಪ್ರಕಾಶ ರೊಟ್ಟೆ, ಶಿವಾಜಿ ಮೇತ್ರೆ, ಕೊಂಡಿಬಾ ಪಾಂಡ್ರೆ, ಶಿವರಾಜ ಪಾಟೀಲ ಹಾಗೂ ಶಿವರಾಯ ಮುಧಾಳೆ, ಶಕುಂತಲಾ, ಮಕಬುಲ್ ಸಾಬ, ಬಸವರಾಜ ಅಷ್ಟೂರೆ, ವಿಠಲರಾವ ಮೇತ್ರೆ, ಅಣ್ಣೆಪ್ಪಾ ಶಶಿ, ಶಿವರಾಜ ಪಾಟೀಲ್ ಅತಿವಾಳ, ವಿರೇಂದ್ರ ಪಾಟೀಲ್, ವೀರಶೇಟ್ಟಿ ಕಾಳೆ, ಘಾಳೆಪ್ಪಾ ಬೊಂಡೆ, ಸಂತೋಷಕುಮಾರ ಎಸ್ ಗುದಗೆ ಸೇರಿದಂತೆ ರೈತ ಮುಖಂಡರು ಪಾಲ್ಗೊಂಡಿದ್ದರು.