ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಕೆಗೆ ಆಗ್ರಹ

| Published : Sep 27 2024, 01:18 AM IST

ಸಾರಾಂಶ

ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲ ಅಮಾನತ್ತುಗಳನ್ನು ತಕ್ಷಣವೇ ರದ್ದುಪಡಿಸಿ ಹಿಂಪಡೆಯಬೇಕು.

ಕಂಪ್ಲಿ: ಪಟ್ಟಣದ ತಹಸೀಲ್ದಾರ್ ಕಚೇರಿಯ ಎದುರು ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಕಂಪ್ಲಿ ತಾಲೂಕು ಸಂಘದಿಂದ ಗುರುವಾರ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆಯನ್ನು ನಡೆಸಲಾಯಿತು.

ಸಂಘದ ತಾಲೂಕು ಅಧ್ಯಕ್ಷ ಎಚ್.ವಿ. ಮಂಜುನಾಥ್ ಮಾತನಾಡಿ, ಮೊಬೈಲ್/ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಹಾಗೂ ಸಿ-ವೃಂದದ ನೌಕರರ ಹತ್ತು ಪಟ್ಟು ಕೆಲಸಗಳ ಜವಾಬ್ದಾರಿಯನ್ನು ವಹಿಸುತ್ತಿರುವುದರಿಂದ ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ಹೊರಡಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲ ಅಮಾನತ್ತುಗಳನ್ನು ತಕ್ಷಣವೇ ರದ್ದುಪಡಿಸಿ ಹಿಂಪಡೆಯಬೇಕು. ಕೆ.ಸಿ.ಎಸ್.ಆರ್ ನಿಯಮಾವಳಿಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕದಿರಲು, ಮೆಮೋ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸೂಕ್ತ ಆದೇಶ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕುರುಬರ ಮಂಜುನಾಥ, ಖಜಾಂಚಿ ಕರೆಗೌಡ್ರ ಸುರೇಶ್, ಗ್ರಾಮ ಆಡಳಿತ ಅಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶಿವರುದ್ರಯ್ಯ, ಮಹಿಳಾ ಅಧ್ಯಕ್ಷೆ ವನಿತಾ ಕುಮಾರಿ, ರಾಘವೇಂದ್ರ, ಲಕ್ಷ್ಮಣ್ ನಾಯಕ್, ಮಹ್ಮದ್ ರಬ್, ಅಬ್ದುಲ್ ಕಾಂತರಾಜ್ ರಮೇಶ್ ಜ್ಯೋತೆಪ್ಪ, ಗಿರೀಶ್, ಚನ್ನಕೇಶವ, ಕುಸುಮ, ಆಶಾ, ಮನೋಜ್, ವೆಂಕಟೇಶ್ ಸೇರಿ ಗ್ರಾಮ ಸಹಾಯಕರಿದ್ದರು.