ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲಿನ ಒತ್ತಡ, ವೇತನ ವಿಳಂಬ, ಸ್ಥಳ ನಿಯುಕ್ತಿ ಸೇವಾ ರಕ್ಷಣೆ, ಮೀನಾಕ್ಷಿ ಸುಂದರಂ ವರದಿ ಜಾರಿ ಸೇರಿದಂತೆ ಇತರೆ ಬೇಡಿಕೆಗಳನ್ನು ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ಜಿಪಂ ಸಿಇಒಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಜಿಲ್ಲಾಧ್ಯಕ್ಷ ಪರಮೇಶ್ ಮಾತನಾಡಿ, ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಹಾಗೂ ಕೋತಬಾಲ ಎರಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ (ಹೆಚ್ಚುವರಿ ಪ್ರಭಾರ) ಕರ್ತವ್ಯ ನಿರ್ವಹಿಸುತ್ತಿದ್ದ 46 ವರ್ಷದ ಮುಕ್ತಂ ಹುಸೇನ ಕರಡಿಗುಡ್ಡ ಅವರು ಅತಿಯಾದ ಕೆಲಸದ ಒತ್ತಡ ಹಾಗೂ ಹಿಂದಿನ ಪ್ರಕರಣ ಒಂದರ ಮೇಲಿದ್ದ ಲೋಕಾಯುಕ್ತ ತನಿಖೆ ಹಾಗೂ ವೇತನವಿಲ್ಲದೇ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದರು. ಕಳೆದ 8-9 ತಿಂಗಳಿಂದ ಅವರಿಗೆ ಯಾವುದೇ ವೇತನವಾಗಿರಲಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಅವರು ಎಷ್ಟೊಂದು ಮಾನಸಿಕ ಯಾತನೆ ಅನುಭವಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ನೌಕರರ ಮೇಲೆ ನಡೆಯುತ್ತಿರುವ ನಿರಂತರ ಒತ್ತಡಗಳು ಹಾಗೂ ಅನುಭವಿಸುತ್ತಿರುವ ಅಕಾಲಿಕ ಸಾವುಗಳ ಕುರಿತು ಅಧ್ಯಯನ ಮಾಡಲು ಕಳೆದ ಒಂದು ವರ್ಷದ ಹಿಂದ ಮೀನಾಕ್ಷಿ ಸುಂದರಂ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಆದರೆ ಈ ಸಮಿತಿಯು ಇದುವರೆಗೂ ಸರ್ಕಾರಕ್ಕೆ ವರದಿ ಸಲ್ಲಿಸಿರುವುದಿಲ್ಲ ಎಂದರು.

ಸಂತ್ರಸ್ತ ಕುಟುಂಬಕ್ಕೆ ಇಲಾಖೆಯಿಂದ ಸಿಗಬೇಕಾದ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು, ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಿ ಅವರ ಕುಟುಂಬದ ಓರ್ವ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಬೇಕು. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳಿಗೆ ಒತ್ತಡ ರಹಿತವಾಗಿ ಕೆಲಸ ಮಾಡುವ ವಾತಾವರಣವನ್ನು ಸೃಷ್ಟಿಸಬೇಕು. ಕುಲ್ಲಕ ಕಾರಣಕ್ಕಾಗಿ ಅಮಾನತ್ತು ನಿಲ್ಲಬೇಕು. ಕಾಲಮಿತಿಯೊಳಗೆ ತನಿಖೆ ಹಾಗೂ ಅಮಾನತ್ತು ತೆರವುಗೊಳಿಸುವುದು, ಮೀನಾಕ್ಷಿ ಸುಂದರಂ ವರದಿ ಜಾರಿ ಮಾಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.


ಜಿಲ್ಲಾ ಸಂಘದ ಗೌರವಾಧ್ಯಕ್ಷ ವೈ.ಎಲ್.ಗಂಗಾಧರನಾಯ್ಕ, ಮಹಿಳಾ ಉಪಾಧ್ಯಕ್ಷ ಎಲ್.ಸವಿತ, ಖಜಾಂಚಿ ಹೆಚ್.ಎಸ್. ರಾಘವೇಂದ್ರ ಕುಮಾರ್ , ರಾಜ್ಯಪರಿಷತ್ ಸದಸ್ಯ ಎಸ್.ಚಿದಾನಂದ , ಪ್ರಧಾನ ಕಾರ್ಯದರ್ಶಿ ನಾಗರಾಜ್, ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಆರ್‌ಡಿಪಿಆರ್ ಅಧ್ಯಕ್ಷ ಕೇಶವಮೂರ್ತಿ ತಾಲೂಕು ಅಧ್ಯಕ್ಷರು ಸೀನಪ್ಪ, ರಿಯಾಜ್ ಅಹ್ಮದ್, ಪ್ರವೀಣ್ ಕುಮಾರ್, ರವಿ, ನಿಂಗಣ್ಣ ಕಣಮೇಶ್ವರ ಹಾಗೂ ಜಿಲ್ಲೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.