ಉದ್ಯೋಗ ಭದ್ರತೆ ಹಾಗೂ ಸಾಮಾಜಿಕ ಭದ್ರತೆ ಸೇರಿದಂತೆ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕೊಡಗು ಜಿಲ್ಲಾ ಸಮಿತಿ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಉದ್ಯೋಗ ಭದ್ರತೆ ಹಾಗೂ ಸಾಮಾಜಿಕ ಭದ್ರತೆ ಸೇರಿದಂತೆ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಕೊಡಗು ಜಿಲ್ಲಾ ಸಮಿತಿ ಆಗ್ರಹಿಸಿದೆ.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಮಿತಿಯ ಪ್ರಮುಖರು ಹಾಗೂ ಪದಾಧಿಕಾರಿಗಳು ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಬಿಪಿಎಂಸಿ, ಮಿಲ್ ಗೋಡೌನ್ ವೇರಹೌಸ್, ನಗರ ಗ್ರಾಮೀಣ ಬಜಾರ, ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಷನ್, ಬಂದರುಗಳಲ್ಲಿ ಲೋಡಿಂಗ್ ಅನ್‌ಲೋಡಿಂಗ್ ಕೆಲಸ ನಿರ್ವಹಿಸುವವರು ಅಸಂಘಟಿತ ಕಾರ್ಮಿಕರಲ್ಲಿಯೇ ಅತ್ಯಂತ ಶ್ರಮದಾಯಕ ಕೆಲಸ ನಿರ್ವಹಿಸುತ್ತಿದ್ದಾರೆ.ಕರ್ನಾಟಕ ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ ಹಮಾಲಿ ಕಾರ್ಮಿಕರು ಸೇರಿದಂತೆ 85ಕ್ಕೂ ಹೆಚ್ಚು ವಲಯದ ಅಸಂಘಟಿತ ಕಾರ್ಮಿಕರಿಗೆ ಕೇವಲ ಅಪಘಾತ ಸಂಬಂಧಿಸಿದ ಕೆಲ ಪರಿಹಾರ ನೀಡುವ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಸರ್ಕಾರ ನಿರ್ದಿಷ್ಟವಾಗಿ ಯಾವುದೇ ಹಣಕಾಸಿನ ನೆರವು ನೀಡಿಲ್ಲ ಎಂದರು.ಸಾರಿಗೆ ಸಂಬಂಧಿತ ಲೋಡಿಂಗ್ ಅನ್‌ಲೋಡಿಂಗ್ ಕಾರ್ಮಿಕರನ್ನು ಒಳಗೊಂಡು ವಿವಿಧ ಸಾರಿಗೆ ಕ್ಷೇತ್ರದ ಕಾರ್ಮಿಕರಿಗೆ ಕೆಲ ಸೌಲಭ್ಯಗಳನ್ನು ಘೋಷಿಸಿರುವುದು ಸ್ವಾಗತರ್ಹ. ಅದರಂತೆ ಈ ಮಂಡಳಿಯಡಿ ಹಮಾಲಿ ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳಬೇಕು, ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ರೀತಿಯಲ್ಲಿ ಹಣಕಾಸು ಸಂಪನ್ಮೂಲಗಳನ್ನು ಕ್ರೋಢಿಕರಿಸುವ ಯೋಜನೆಯನ್ನು ರೂಪಿಸಿ ಸಮಗ್ರ ಸಾಮಾಜಿಕ ಭದ್ರತೆಯನ್ನು ನೀಡಬೇಕು, ಎಪಿಎಂಸಿಯಲ್ಲಿ ನಿವೃತ್ತರಾಗುವವರಿಗೆ ಕನಿಷ್ಠ 1 ಲಕ್ಷ ರು. ನಿವೃತ್ತಿ ಪರಿಹಾರ ಅಥವಾ ಇಡಿಗಂಟು ನೀಡಬೇಕು ಆಗ್ರಹಿಸಿದರು.ರಾಜ್ಯದ ಲೋಡಿಂಗ್ ಅನ್‌ಲೋಡಿಂಗ್ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು, ಕಾರ್ಮಿಕರಿಗೆ ಜಾರಿಮಾಡುತ್ತಿರುವ ಸೌಲಭ್ಯಗಳೊಂದಿಗೆ ಸಹಜ ಮರಣಕ್ಕೂ 1 ಲಕ್ಷ ರು. ಪರಿಹಾರ ನೀಡಬೇಕು, ಶವ ಸಂಸ್ಕಾರ ಪರಿಹಾರದ ಮೊತ್ತವನ್ನು 25 ಸಾವಿರ ರು.ಕ್ಕೆ ಹೆಚ್ಚಿಸಬೇಕು, ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ``ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ " (ಪಶ್ಚಿಮ ಬಂಗಾಲ ಮಾದರಿ) ಜಾರಿಮಾಡಬೇಕು, ಸೂಕ್ತ ಪಿಂಚಣಿ ಯೋಜನೆಯನ್ನು ಜಾರಿಮಾಡಬೇಕು, ವೈದ್ಯಕೀಯ ಮರುಪಾವತಿ ಯೋಜನೆ ಮುಂದುವರೆಸಬೇಕು, ಪ್ರತಿವರ್ಷ 2 ಜೋತೆ ಸಮವಸ್ತ್ರ ನೀಡಬೇಕು, ಕಡ್ಡಾಯವಾಗಿ ಕಾರ್ಮಿಕ ಕಾನೂನುಗಳು ಜಾರಿಯಾಗುವಂತೆ ಕ್ರಮವಹಿಸಬೇಕು, ಎಲ್ಲಾ ವಿಭಾಗದ ಹಮಾಲಿ ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿಯಾಗುವಂತೆ ಮುತವರ್ಜಿವಹಿಸಬೇಕು ಮತ್ತು ತಕ್ಷಣವೇ ಕನಿಷ್ಟ ವೇತನ ಪರಿಷ್ಕರಣೆಯಾಗಬೇಕು, ವಸತಿ ಯೋಜನೆಯನ್ನು ಜಾರಿ ಮಾಡಬೇಕು. ಕೇಂದ್ರ ಸರ್ಕಾರದ ಇ-ಶ್ರಮ ಕಾರ್ಡ್ ಪಡೆದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಮಾಡಬೇಕು ಎಂದು ಒತ್ತಾಯಿಸಿದರು.ಉಪಾಧ್ಯಕ್ಷರಾದ ಎ.ಕೆ.ಸುಲೈಮಾನ್, ಆರ್.ಎನ್.ರಾಜು, ಎ.ಗೋಪಿ, ಪ್ರಮುಖರಾದ ರಾಜು, ಹೆಚ್.ಆರ್.ಕವನ್ ಕುಮಾರ್ ಮನವಿ ನೀಡುವ ಸಂದರ್ಭ ಹಾಜರಿದ್ದರು.