ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ (ಕೆಎಐಡಿಬಿ) ಹೊಸ ನಿಯಮಾವಳಿಗಳ ಪ್ರಕಾರ ಕೈಗಾರಿಕೆಗಳಿಗೆ ಅಭಿವೃದ್ಧಿಪಡಿಸಿದ ಜಮೀನಿನಲ್ಲಿ ಶೇ. 60ರಷ್ಟು ಭೂ ಸಂತ್ರಸ್ತರಿಗೆ ನೀಡಬೇಕು ಎಂದು ಕುಡಿತಿನಿ ಭೂ ಸಂತ್ರಸ್ತರ ಹೋರಾಟ ಸಮಿತಿ ಆಗ್ರಹಿಸಿದೆ.
ಬಳ್ಳಾರಿ: ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ (ಕೆಎಐಡಿಬಿ) ಹೊಸ ನಿಯಮಾವಳಿಗಳ ಪ್ರಕಾರ ಕೈಗಾರಿಕೆಗಳಿಗೆ ಅಭಿವೃದ್ಧಿಪಡಿಸಿದ ಜಮೀನಿನಲ್ಲಿ ಶೇ. 60ರಷ್ಟು ಭೂ ಸಂತ್ರಸ್ತರಿಗೆ ನೀಡಬೇಕು ಎಂದು ಕುಡಿತಿನಿ ಭೂ ಸಂತ್ರಸ್ತರ ಹೋರಾಟ ಸಮಿತಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ಯು. ಬಸವರಾಜ್, ಕೈಗಾರಿಕೆ ಅಭಿವೃದ್ಧಿ ಹೆಸರಿನಲ್ಲಿ ಕುಡಿತಿನಿ ಸುತ್ತಮುತ್ತಲ ಪ್ರದೇಶಗಳಿಂದ ರೈತರ ಪಡೆದ ಜಮೀನಿಗೆ ಸರಿಯಾದ ಬೆಲೆ ನೀಡದೆ ಮೋಸ ಎಸಗಲಾಗಿದೆ. ಇದಕ್ಕಾಗಿ ನಿರಂತರವಾಗಿ ಹೋರಾಟ ನಡೆಸುತ್ತಾ ಬರಲಾಗಿದೆ. ಕೆಎಐಡಿಬಿಯವರು ಈ ವರೆಗೆ ವಶಪಡಿಸಿಕೊಂಡ ಜಮೀನಿಗೆ ಹಣದ ರೂಪದಲ್ಲಿ ಮಾತ್ರ ಪರಿಹಾರ ನೀಡುತ್ತಿದ್ದರು. ಹೊಸ ನಿಯಮದ ಪ್ರಕಾರ ಅಭಿವೃದ್ಧಿ ಹೊಂದಿದ ಜಮೀನನ್ನು ಸಹ ನೀಡಲು ಸಮ್ಮತಿಸಿದ್ದು, ಈಗಾಗಲೇ ರೈತರಿಂದ ವಶಪಡಿಸಿಕೊಂಡಿರುವ ಜಮೀನಿನ ಶೇ. 60ರಷ್ಟನ್ನು ರೈತರಿಗೆ ಬಿಟ್ಟುಕೊಡಲಿ ಎಂದು ಒತ್ತಾಯಿಸಿದರು.ರಾಜ್ಯ ಸರ್ಕಾರದ ಕೆಎಐಡಿಬಿಯಲ್ಲಿ ಬ್ರಿಟಿಷ್ ಸರ್ಕಾರದ ಕಾಯ್ದೆಗಳು ಇಂದಿಗೂ ಮುಂದುವರಿದಿವೆ. ರೈತರ ಹಿತ ಕಾಯುವ ಯಾವುದೇ ಆಶಯ ಹಾಗೂ ಉದ್ದೇಶ ಈ ಸಂಸ್ಥೆಗಿಲ್ಲ. ಕುಡಿತಿನಿ ಭೂ ಸಂತ್ರಸ್ತರಿಗೆ ಮಾಡಿರುವ ಅನ್ಯಾಯವನ್ನು ಈ ವರೆಗೆ ಸರಿಪಡಿಸಲಾಗಿಲ್ಲ. ಮಿತ್ತಲ್ ಮತ್ತಿತರ ಕಂಪನಿಗಳು ಕೈಗಾರಿಕೆ ಸ್ಥಾಪಿಸಲಿವೆ ಎಂದು ಹೇಳಿ ವಶಪಡಿಸಿಕೊಂಡ ಜಮೀನನ್ನು ಜಿಂದಾಲ್‌ಗೆ ಪರಾಭಾರೆ ಮಾಡಿಕೊಡುವ ಕೆಲಸವಾಗುತ್ತಿದೆ. ಹೊಸದಾಗಿ ನೋಟಿಫಿಕೇಷನ್ ಮಾಡದೆ ಜಮೀನು ಪರಾಭಾರೆಯ ಕೃತ್ಯ ನಡೆದಿದೆ. ಇದು ರೈತ ವಿರೋಧಿ ನಿರ್ಧಾರವಾಗಿದೆ ಎಂದರು.
ಕುಡಿತಿನಿ ಭೂ ಸಂತ್ರಸ್ತರಿಗೆ ಆಗಿರುವ ಅನ್ಯಾಯ ಖಂಡಿಸಿ ಈಚೆಗೆ ಕರೆ ನೀಡಿದ್ದ ಬಳ್ಳಾರಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾವು ಹೋರಾಟ ಮುಂದುವರಿಸುವ ನಿರ್ಧಾರ ಕೈಗೊಳ್ಳಲಿದ್ದೇವೆ. ರೈತರ ಸಭೆ ಕರೆದು ಮುಂದಿನ ಹಂತದ ಹೋರಾಟ ಕುರಿತು ಚರ್ಚೆ ನಡೆಸುತ್ತೇವೆ. ವಿಧಾನಸೌಧದ ಮುಂದೆ ಅನಿರ್ದಿಷ್ಟ ಹೋರಾಟ ನಡೆಸುವುದು ಅಥವಾ ಕೈಗಾರಿಕೆಗಳಿಗೆ ನೀಡಿರುವ ಜಮೀನುಗಳಿಗೆ ಮರಳಿ ಪ್ರವೇಶ ಮಾಡುವ ಕುರಿತು ಸಭೆಯಲ್ಲಿ ನಿರ್ಧರಿಸುತ್ತೇವೆ ಎಂದು ತಿಳಿಸಿದರು. ಕಾರ್ಮಿಕ ಮುಖಂಡ ತೆಕ್ಕಲಕೋಟೆ ತಿಪ್ಪಯ್ಯ, ಜೆ. ಸತ್ಯಬಾಬು, ಜಂಗ್ಲಿಸಾಬ್, ಬಸವನಗೌಡ ಮತ್ತಿತರರಿದ್ದರು.