ಉಡುಪಿ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ ಅವರ ನೂತನ ಸಚಿವ ಸಂಪುಟದಲ್ಲಿ ಕ್ರೈಸ್ತ ಸಮುದಾಯದ ಶಾಸಕ ಕೆ.ಜೆ. ಜಾರ್ಜ್ ಅವರಿಗೆ ಉಪಮುಖ್ಯಮಂತ್ರಿ ಹಾಗೂ ಕರಾವಳಿಯ ಐವನ್ ಡಿಸೋಜ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಕಥೊಲಿಕ್ ಸಭಾ ಉಡುಪಿ ಪ್ರದೇಶ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿದೆ.

ಕೆ.ಜೆ. ಜಾರ್ಜ್ ಅವರು ಅತ್ಯಂತ ಹಿರಿಯ ರಾಜಕಾರಣಿಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅತ್ಯುನ್ನತವಾದ ಸೇವೆ ನೀಡಿದ್ದಾರೆ. ಕ್ರೈಸ್ತ ಸಮುದಾಯಕ್ಕೆ ಈವರೆಗೆ ಇಂತಹ ಉನ್ನತ ಹುದ್ದೆ ಲಭಿಸಿಲ್ಲ. ಈ ಬಾರಿಯಾದರೂ ಇಂತಹ ಅವಕಾಶ ಒದಗಿ ಬರಲಿದೆ ಎಂಬ ಆಶಾಭಾವನೆ ಇದ್ದು, ಈ ನಿಟ್ಟಿನಲ್ಲಿ ಪಕ್ಷ ಗಮನ ಹರಿಸಬೇಕಾಗಿದೆ.

ಕಾಂಗ್ರೆಸ್ ಪಕ್ಷದ ಗೆಲುವಿಗೆ ಕ್ರೈಸ್ತ ಸಮುದಾಯದ ಕೊಡುಗೆ ಅಪಾರವಾಗಿದ್ದು, ರಾಜ್ಯದ 23 ಕ್ಷೇತ್ರಗಳಲ್ಲಿ ಕ್ರೈಸ್ತ ಸಮುದಾಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ. ಸಮುದಾಯಕ್ಕೆ ಪ್ರತಿ ಬಾರಿ ಉನ್ನತ ಸ್ಥಾನಗಳನ್ನು ನೀಡುವಾಗ ಅವಕಾಶ ವಂಚಿತವಾಗಿದ್ದು, ಈ ಬಾರಿ ಡಿ.ಕೆ. ಶಿವಕುಮಾರ್ ಅವರು ಎಲ್ಲ ಸಮುದಾಯಗಳಿಗೆ ಸಮಾನವಾಗಿ ಅವಕಾಶ ನೀಡುವ ಕೆಲಸ ಮಾಡಬೇಕು. ಈ ಮೂಲಕ ಐವನ್ ಡಿಸೋಜವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಂಘಟನೆ ಅಧ್ಯಕ್ಷ ಮೆಲ್ವಿನ್ ಆರಾನ್ಹಾ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.