ಜನತಾ ಪ್ಲಾಟ್ ನಿವಾಸಿಗಳಿಗೆ ಮನೆಯ ಹಕ್ಕುಪತ್ರ ನೀಡಲು ಆಗ್ರಹ

| Published : Nov 22 2024, 01:15 AM IST

ಜನತಾ ಪ್ಲಾಟ್ ನಿವಾಸಿಗಳಿಗೆ ಮನೆಯ ಹಕ್ಕುಪತ್ರ ನೀಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಶಿರಗಂಬಿ ರಸ್ತೆಯ ಜನತಾ ಪ್ಲಾಟ್ ನಿವಾಸಿಗಳಿಗೆ ಮನೆಯ ಇ ಸ್ವತ್ ಹಾಗೂ ಹಕ್ಕುಪತ್ರ ನೀಡುವಂತೆ ಅಲ್ಲಿನ ನಿವಾಸಿಗಳು ಶಾಸಕ ಯು.ಬಿ. ಬಣಕಾರಗೆ ಮನವಿ ಸಲ್ಲಿಸಿದರು.

ರಟ್ಟೀಹಳ್ಳಿ: ಪಟ್ಟಣದ ಶಿರಗಂಬಿ ರಸ್ತೆಯ ಜನತಾ ಪ್ಲಾಟ್ ನಿವಾಸಿಗಳಿಗೆ ಮನೆಯ ಇ ಸ್ವತ್ ಹಾಗೂ ಹಕ್ಕುಪತ್ರ ನೀಡುವಂತೆ ಅಲ್ಲಿನ ನಿವಾಸಿಗಳು ಶಾಸಕ ಯು.ಬಿ. ಬಣಕಾರಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಬಸವರಾಜ ಕಟ್ಟಿಮನಿ ಕಳೆದ 40 ವರ್ಷಗಳಿಂದ 500ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ಕಾಯಂ ನಿವಾಸಿಗಳಾಗಿದ್ದು, ಬಹುತೇಕರು ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಿಂದುಳಿದ ಜನಾಂಗದವರೇ ಹೆಚ್ಚಿದ್ದು ಈ ಹಿಂದೆ ರಟ್ಟೀಹಳ್ಳಿ ಮಂಡಲ ಪಂಚಾಯತ್ ಪ್ರಧಾನರು 1972 ಮೇ 13 ರಂದು ಡಿ.ಪಿ.ಸಿ 15 ಡಿ.ಆರ್.ಹೆಚ್ ಕ್ರಮಾಂಕದ ಸರಕಾರಿ ಆದೇಶದಲ್ಲಿ ನಿರ್ದಿಷ್ಟ ಪಡಿಸಿದ ನಿಬಂಧನೆಗಳು ಹಾಗೂ ಷರತ್ತುಗಳ ಅನುಸಾರವಾಗಿ ಅಂದಿನ ಧಾರವಾಡ ಜಿಲ್ಲೆ ಹಿರೇಕೆರೂರು ತಾಲೂಕಿನ ರಟ್ಟೀಹಳ್ಳಿ ಗ್ರಾಮದ ಶಿರಗಂಬಿ ರಸ್ತೆಯ ಜನತಾ ಪ್ಲಾಟ್‌ನಲ್ಲಿ ವಾಸವಾಗಿರುವ ಕುಟುಂಬಗಳಿಗೆ 1991 ಜನವರಿ ತಿಂಗಳಿನಲ್ಲಿ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರಗಳನ್ನು ನೀಡಿ ಸದರಿ ನಿವೇಶನಗಳು ಕಾಲಕಾಲಕ್ಕೆ ಅಂದಿನ ರಟ್ಟೀಹಳ್ಳಿ ಗ್ರಾಮ ಪಂಚಾಯಿತಿಯಿಂದ ಸಂಬಂಧಿಸಿದ ಕುಟುಂಬಗಳಿಗೆ ಸರಕಾರದ ವಿವಿಧ ವಸತಿ ಯೋಜನೆಯಲ್ಲಿ ಆಶ್ರಯ ಮನೆ ಮಂಜೂರಾಗಿ ಈಗಾಗಲೇ ಮನೆಗಳನ್ನು ನಿರ್ಮಿಸಿಕೊಂಡು 35-40 ವರ್ಷಗಳಾದರೂ ನಮ್ಮ ಮನೆಗಳ ಹಕ್ಕು ಪತ್ರ ಹಾಗೂ ಇ ಖಾತಾ ಆಗದ ಕಾರಣ ಇಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ಬ್ಯಾಂಕ್‌ಗಳಲ್ಲಿ ಮನೆಗಳ ಮೇಲೆ ಸಾಲ ಸೌಲಭ್ಯಗಳು ಸಿಗುತ್ತಿಲ್ಲ. ಕಾರಣ ಈ ಬಗ್ಗೆ ಇಲ್ಲಿನ ನಿವಾಸಿಗಳಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಇಲ್ಲಿನ ನಿವಾಸಿಗಳಿಂದ ಪಟ್ಟಣ ಪಂಚಾಯತನವರು ನಮ್ಮಿಂದ ಕರ ವಸೂಲಿ ನೀರಿನ ಟ್ಯಾಕ್ಸ, ಕೆಇಬಿಯವರು ಕರೆಂಟ್ ಬಿಲ್ಲಗಳನ್ನು ಕಟ್ಟುತ್ತಿದ್ದರೂ ನಮಗೆ ಸರಕಾರಿ ಸವಲತ್ತುಗಳು ಸಿಗದೆ ವಂಚಿತರಾಗಿದ್ದು ಮಾನ್ಯ ಶಾಸಕರು ಆದಷ್ಟು ಬೇಗ ಸಮಸ್ಯ ಪರಿಹರಿಸಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಯು.ಬಿ. ಬಣಕಾರ ಈ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಮನೆಗಳ ಹಕ್ಕು ಪತ್ರ ಸರಕಾರ ಮಟ್ಟದಲ್ಲಿ ಚರ್ಚೆಯಾಗಬೇಕಾಗಿದ್ದು ಕಾರಣ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು, ಸಚಿವರ ಹಾಗೂ ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಜನತಾ ಪ್ಲಾಟ್ ನಿವಾಸಿಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

ಸುರೇಶ ಚಲವಾದಿ, ಗುರುರಾಜ ಬಿಳಗಿಶೆಟ್ಟರ, ಬಸವರಾಜ ಚಲವಾದಿ, ಜಯಪ್ಪ ದ್ಯಾವನಕಟ್ಟಿ, ಹನುಮಂತ ಉಪ್ಪಾರ, ವೀರನಗೌಡ ಪಾಟೀಲ್ ಮುಂತಾದವರು ಇದ್ದರು.