ದಲಿತ ಸಮುದಾಯದ ಹಿರಿಯ ಹಾಗೂ ಪ್ರಭಾವಿ ನಾಯಕರಾದ ಡಾ.ಕೆ.ಎಚ್.ಮುನಿಯಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾದಾರ ಮಹಾಸಭಾ ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಶಿವಪ್ಪನಾಯಕ ವೃತ್ತದ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು.

ಶಿವಮೊಗ್ಗ: ದಲಿತ ಸಮುದಾಯದ ಹಿರಿಯ ಹಾಗೂ ಪ್ರಭಾವಿ ನಾಯಕರಾದ ಡಾ.ಕೆ.ಎಚ್.ಮುನಿಯಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾದಾರ ಮಹಾಸಭಾ ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಶಿವಪ್ಪನಾಯಕ ವೃತ್ತದ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು.

ಕೆ.ಎಚ್.ಮುನಿಯಪ್ಪನವರು ಕೇಂದ್ರ ಸಚಿವರಾಗಿ ಪ್ರಸ್ತುತ ರಾಜ್ಯ ಸಚಿವರಾಗಿ ದೀರ್ಘಕಾಲದ ಆಡಳಿತದ ಅನುಭವ ಹೊಂದಿದ್ದು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಾಗೂ ಜನಪರ ನಾಯಕರಾಗಿದ್ದಾರೆ. ಐದು ದಶಕಗಳಿಂದ ಪಕ್ಷ ಸಂಘಟನೆ, ದಲಿತ ಸಮುದಾಯಗಳ ಹಕ್ಕುಗಳ ರಕ್ಷಣೆ, ಹಾಗೂ ಸಾಮಾಜಿಕ ನ್ಯಾಯದ ಪರ ಹೋರಾಟ ನಡೆಸಿ, ರಾಜ್ಯದ ಮಾದಿಗ ಸಮುದಾಯದ ರಾಜಕೀಯ ಧ್ವನಿಯಾಗಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಇದುವರೆಗೆ ಮಾದಿಗ ಸಮುದಾಯಕ್ಕೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಸ್ಥಾನ ದೊರಕಿಲ್ಲ. ಆದ್ದರಿಂದ ಸಾಮಾಜಿಕ ನ್ಯಾಯದ ಆಶಯವನ್ನು ಬಲಪಡಿಸುವ ನಿಟ್ಟಿನಲ್ಲಿ ಡಾ.ಕೆ. ಎಚ್.ಮುನಿಯಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ರಾಜ್ಯದಲ್ಲಿ ಪಕ್ಷದ ಬಲ ಹೆಚ್ಚಲಿದೆ. ಆದ್ದರಿಂದ ಕೂಡಲೇ ಪಕ್ಷದ ವರಿಷ್ಠರು ಸಮುದಾಯದ ಭಾವನೆಗಳಿಗೆ ಸ್ಪಂದಿಸಿ ಕೆ.ಎಚ್. ಮುನಿಯಪ್ಪನವರಿಗೆ ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಚ್.ಶಿವಾಜಿ, ಪ್ರಧಾನ ಕಾರ್ಯದರ್ಶಿ ತೇಜೇಶ್‍ ರಾಮಚಂದ್ರ, ಪ್ರಮುಖರಾದ ರಮೇಶ್, ಸೂಲಯ್ಯ, ಮಂಜಪ್ಪ ಬೀರನಕೆರೆ, ಎಚ್‌.ಎನ್‌.ಪ್ರಭು., ನೀಲಪ್ಪ, ಗಾಜನೂರು ನಾಗರಾಜ್, ಜಗದೀಶ್ ಬೋಜಪ್ಪ, ಪ್ರಕಾಶ್, ಚಂದ್ರಪ್ಪ, ಮಂಜು ಪುರ್ಲೆ, ಪರಶುರಾಮ್, ಕೃಷ್ಣಪ್ಪ, ಲಕ್ಕಣ್ಣ ಮತ್ತಿತರರು ಇದ್ದರು.