ಗಡಿನಾಡು ಪಾವಗಡ ತಾಲೂಕಿನಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಿ ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಹಸೀಲ್ದಾರ್ ವೈ,ರವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಪಾವಗಡ
ಗಡಿನಾಡು ಪಾವಗಡ ತಾಲೂಕಿನಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಿ ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಹಸೀಲ್ದಾರ್ ವೈ,ರವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಪದಾಧಿಕಾರಿಗಳು ತಾಲೂಕು ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಗಡಿನಾಡಿನಲ್ಲಿ ಕನ್ನಡ ಭಾಷೆಯ ಏಳಿಗೆಗಾಗಿ ನಿರಂತರ ಹೋರಾಟ ಮಾಡಲಾಗುತ್ತಿದೆ. ಕನ್ನಡಕ್ಕೆ ಆಡಳಿತ ಹಾಗೂ ವೃತ್ತಿಪರ ಕ್ಷೇತ್ರದಲ್ಲೂ ಆದ್ಯತೆ ನೀಡಬೇಕು, ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಗಳು ಗಡಿ ಭಾಗದಲ್ಲಿ ಉಳಿಯಬೇಕಾದರೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅನ್ಯ ಭಾಷೆಯ ಹಾಡು, ಭಾಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ಕನ್ನಡದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಸಲುವಾಗಿ ತಾಲೂಕಿನ ಎಲ್ಲಾ ಸರ್ಕಾರಿ ಇಲಾಖೆಗಳು, ಶಾಲಾ ಕಾಲೇಜುಗಳು, ಮತ್ತು ಸಂಘ ಸಂಸ್ಥೆಗಳು ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಕನ್ನಡದ ಘನತೆ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂಬುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮನವರಿಕೆ ಮಾಡಿದರು.
ತಾಲೂಕಿನಲ್ಲಿ ಕರವೇ ದಿಂದ ರಾಜ್ಯೋತ್ಸವ ಆಚರಣೆಯಾಗಿ ಇನ್ನೂ ಒಂದು ವಾರವೂ ಕಳೆದಿಲ್ಲ. ಆಗಲೇ ಸರ್ಕಾರಿ ಕಾರ್ಯಕ್ರಮ ಒಂದರಲ್ಲಿ ಅನ್ಯಭಾಷೆ ಹಾಡು ಕೇಳಿ ಬಂದಿದೆ. ಈ ಕೂಡಲೇ ತಹಸೀಲ್ದಾರ್ ರವರು ಸೂಕ್ತ ಕ್ರಮ ಕೈಗೊಂಡು ಎಲ್ಲಾ ಇಲಾಖೆಗಳಿಗೂ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಿ ಕಾರ್ಯಕ್ರಮ ಆಯೋಜಿಸಿಕೊಳ್ಳುವಂತೆ ಆದೇಶ ನೀಡುವ ಮೂಲಕ ಗಡಿನಾಡಿನಲ್ಲಿ ಕನ್ನಡ ಭಾಷೆಯ ಸರ್ವತೋಭಿವೃದ್ಧಿಗೆ ಶ್ರಮಿಸಬೇಕು ಎಂದು ಒತ್ತಾಯಿಸಿ ಮನವಿ ಮಾಡಿದರು.ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್,ಸರ್ಕಾರಿ ಕಚೇರಿಯಲ್ಲಿ ,ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು. ಈ ವೇಳೆ ಕರವೇ ನಗರ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ಯುವ ಘಟಕದ ಅಧ್ಯಕ್ಷ ಗೋಪಾಲ್ , ಪವನ್ ಹಾಗೂ ಪದಾಧಿಕಾರಿಗಳು ಇದ್ದರು.