ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾರ್ಮಿಕ ಸಚಿವರಾಗಿ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಹಿಂದ ನಾಯಕ ಸಂತೋಷ್‌ಲಾಡ್ ಅವರಿಗೆ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಮರಾಠ ಸಮಾಜದ ವತಿಯಿಂದ ಮಂಗಳವಾರ ಸೀನಪ್ಪಶೆಟ್ಟಿ (ಗೋಪಿ) ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಮಾಜದ ಜಿಲ್ಲಾಧ್ಯಕ್ಷ ಶಿವಾಜಿರಾವ್ ಸಿಂಧ್ಯಾ ಮಾತನಾಡಿ, ಸಂತೋಷ್‌ಲಾಡ್ ಅವರು ಅಹಿಂದ ನಾಯಕರಾಗಿ ಎಲ್ಲಾ ಸಮುದಾಯದವರಿಗೆ ನೆರವಿನ ಹಸ್ತ ನೀಡಿದ್ದಾರೆ. ತಮ್ಮ ಫೌಂಡೇಷನ್ ಮೂಲಕ ಕಡು ಬಡವರಿಗೆ ೪೮೦೦ ಉಚಿತ ಬೋರ್ ತೋಡಿಸಿ ನೀರಿನ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಸಾವಿರಾರು ಜನರಿಗೆ ಸ್ವ-ಉದ್ಯೋಗ ಕಲ್ಪಿಸಿದ್ದಾರೆ. ಕಾಶ್ಮೀರದ ದುರ್ಘಟನೆಯಲ್ಲಿ ಕನ್ನಡಿಗರ ಮೇಲೆ ಹಲ್ಲೆಯಾದಾಗ ಗಾಯಾಳುಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಿದ್ದರು ಮತ್ತು ಮೃತಪಟ್ಟವರ ಶರೀರವನ್ನು ವಿಶೇಷ ವಿಮಾನದ ಮೂಲಕ ರಾಜ್ಯಕ್ಕೆ ತೆಗೆದುಕೊಂಡು ಬರುವಲ್ಲಿ ವಿಶೇಷ ಪಾತ್ರವಹಿಸಿದ್ದರು. ಜನಾನುರಾಗಿಯಾಗಿರುವ ಇವರಿಗೆ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಲೇಬೇಕು. ಕಾಂಗ್ರೆಸ್ಸಿನ ಕಟ್ಟಾಳು ಆದ ಮತ್ತು ಪಕ್ಷದ ಸಂಘಟನೆಗೆ ಅವಿರತವಾಗಿ ಶ್ರಮಪಟ್ಟ ಇವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಉಪಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ರಾಜ್ಯಾದ್ಯಂತ ಕ್ಷತ್ರಿಯ ಮರಾಠ ಸಮಾಜದಿಂದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಎಐಸಿಸಿ ನಾಯಕರಾದ ರಾಹುಲ್‌ಗಾಂಧಿ, ಸೋನಿಯಾಗಾಂಧಿ, ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ, ವೇಣುಗೋಪಾಲ್, ರಣದೀಪ್‌ ಸುರ್ಜೇವಾಲ ಇವರಿಗೆ ಈಗಾಗಲೇ ನಮ್ಮ ಮನವಿಯನ್ನು ಫ್ಯಾಕ್ಸ್‌ ಮೂಲಕ ಕಳುಹಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಗೀತಾ ಸತೀಶ್, ಕವಿತಾ ತೋರದ್, ಮೀರಾಬಾಯಿ, ದಿನೇಶ್ ಚೌವ್ಹಾಣ್, ಅರ್ಜುನ್‌ರಾವ್, ಕೆ.ಎಲ್.ರಮೇಶ್, ರವಿಕುಮಾರ್ ಮತ್ತಿತರರಿದ್ದರು.