ಯಲಬುರ್ಗಾ : ದಲಿತರಿಗೆ ಭೂಮಿ ಬಿಟ್ಟುಕೊಡುವಂತೆ ಆಗ್ರಹ - ತಹಸೀಲ್ದಾರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ

| Published : Sep 06 2024, 01:13 AM IST / Updated: Sep 06 2024, 10:47 AM IST

ಯಲಬುರ್ಗಾ : ದಲಿತರಿಗೆ ಭೂಮಿ ಬಿಟ್ಟುಕೊಡುವಂತೆ ಆಗ್ರಹ - ತಹಸೀಲ್ದಾರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ನಾನಾ ದಲಿತ ಸಂಘಟನೆಗಳು ಹಾಗೂ ಶಿರಗುಂಪಿ ಗ್ರಾಮದ ದಲಿತರು ಪಟ್ಟಣದ ತಹಸೀಲ್ದಾರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

 ಯಲಬುರ್ಗಾ : ತಾಲೂಕಿನ ಶಿರಗುಂಪಿ ಗ್ರಾಮದ ಜಮೀನಿನ ಸರ್ವೆ ನಂ.57 , ವಿಸ್ತೀರ್ಣ 14 ಎಕರೆ 22 ಗುಂಟೆ ಜಮೀನಿನಲ್ಲಿ ಕಳೆದ 70 ವರ್ಷಗಳಿಂದ ದಲಿತ ಸಮುದಾಯ ಸಾಗುವಳಿದಾರರ ಕಾಲಂನಲ್ಲಿ ಇದ್ದು, ಸಾಗುವಳಿ ಮಾಡಿಕೊಂಡು ಬಂದಿದ್ದು ಅವರನ್ನು ಜಮೀನಿನಿಂದ ಹೊರಹಾಕದಂತೆ ಸದರಿ ಪಹಣಿಯನ್ನು ಯಥಾಸ್ಥಿತಿಯಲ್ಲಿಡುವಂತೆ ಒತ್ತಾಯಿಸಿ ನಾನಾ ದಲಿತ ಸಂಘಟನೆಗಳು ಹಾಗೂ ಶಿರಗುಂಪಿ ಗ್ರಾಮದ ದಲಿತರು ಪಟ್ಟಣದ ತಹಸೀಲ್ದಾರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.ದಲಿತ ಸಮುದಾಯದವರು ಮತ್ತು ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಹಾಗೂ ದಲಿತಪರ ಸಂಘಟನೆಗಳು ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಮೂಲಕ ಹಲಿಗೆ ಬಾರಿಸುತ್ತಾ ತಹಸೀಲ್ದಾರ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ಸತ್ಯಾಗ್ರಹ ನಡೆಸಿದರು.

ಜಮೀನಿನ ವಿಚಾರವಾಗಿ ದಲಿತ ಕುಟುಂಬದವರು ೧೯೮೪ರಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಕರ್ನಾಟಕ ಭೂ ನ್ಯಾಯ ಮಂಡಳಿಯ ಮೂಲಕ ಅವರಿಗೆ ಮಂಜೂರು ಮಾಡುವಂತೆ ಕೋರಿದ್ದರು. ಜಮೀನು ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ಯಲಬುರ್ಗಾ ಇವರ ಹೆಸರಿನಲ್ಲಿದೆ. ಈ ಜಮೀನನ್ನು ದಲಿತ ಕುಟುಂಬದವರ ಹೆಸರಿನಲ್ಲಿ ಮಂಜೂರು ಮಾಡಲು ಅಭ್ಯಂತರ ಇಲ್ಲವೆಂದು ೧೯೯೧ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಈ ಜಮೀನಿನಲ್ಲಿ ಸಾಗುವಳಿದಾರರು ಸಾಗುವಳಿ, ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಆದರೆ ಈಗ ಜಮೀನನ್ನು ಬೇರೆಯವರ ಹೆಸರಿನಲ್ಲಿ ವರ್ಗಾವಣೆ ಮಾಡಿರುವ ಆದೇಶ ಕಾನೂನು ಬಾಹಿರವಾಗಿದೆ ಸತ್ಯಾಗ್ರಹನಿರತರು ಆರೋಪಿಸಿದರು.

ಈ ಸಂದರ್ಭ ದಲಿತ ಮುಖಂಡರಾದ ಬಸವರಾಜ ನಡುವಲಮನಿ, ಆಶೋಕ ಮಾದರ, ಹನುಮಂತಪ್ಪ ಹೊಸಳ್ಳಿ, ಶರಣಪ್ಪ ಹಿರೇಮನಿ, ಕರಿಯಪ್ಪ ಮಣ್ಣಿನವರ್, ನಾಗರಾಜ ಯಡಿಯಾಪೂರ, ಬಲವಂತ ಪೂಜಾರ, ಯಲ್ಲಪ್ಪ ಸಣ್ಣಿಗನೂರು, ಯಮನೂರಪ್ಪ ಶಿರಗುಂಪಿ, ಸಾವಕ್ಕ ಚಲವಾದಿ, ರೇಣುಕಾ ಚಲವಾದಿ, ಈರವ್ವ, ಶಾಂತವ್ವ, ಹುಲಿಗೆವ್ವ, ಮಂಜುವ್ವ, ಶರಣವ್ವ, ದುರ್ಗವ್ವ ಹನಮವ್ವ, ಕಳಕಪ್ಪ ಹರಿಜನ, ಪರಸಪ್ಪ, ಯಲ್ಲಪ್ಪ ಮತ್ತಿತರರು ಇದ್ದರು.

೦೫ವೈಎಲ್‌ಬಿ೧: ದಲಿತ ಸಂಘಟನೆಗಳು ಹಾಗೂ ಶಿರಗುಂಪಿ ಗ್ರಾಮದ ದಲಿತರು ಪಟ್ಟಣದ ತಹಸೀಲ್ದಾರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.