ಸಾರಾಂಶ
ಗದಗ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಮಾಡಿದ ಗಿರೀಶನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಆನಂತರ ಅಪರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಬಿಲಾಲ್ ಗೋಕಾವಿ ಮಾತನಾಡಿ, ರಾಜ್ಯದಲ್ಲಿ ಸರಣಿ ಕೊಲೆಗಳು ನಡೆಯುತ್ತಿವೆ. ರುಕ್ಸಾನಾ, ನೇಹಾ ಹಿರೇಮಠ, ಅಂಜಲಿ ಇನ್ನೂ ಹಲವು ಪ್ರೇಮ ವೈಫಲ್ಯದಿಂದ ಹತ್ಯೆಗಳು ನಡೆದಿರುವುದು ವಿಷಾದದ ಸಂಗತಿ. ಪ್ರವೀಣ್ ಚೌಗಲೆ, ಫಯಾಜ್, ಗಿರೀಶ ಈ ರೀತಿ ವಿಕೃತ ಮನಸ್ಥಿತಿಯ ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಗಬೇಕು. ಅಂತಹ ಪ್ರಕರಣಗಳ ತ್ವರಿತ ವಿಚಾರಣೆಗೆ ಕಾನೂನು ತರಬೇಕು. ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಅನ್ವರ್ ಬಾಗೇವಾಡಿ ಮಾತನಾಡಿ, ರಾಜ್ಯದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜಿಲ್ಲಾಡಳಿತ ಈ ಕೂಡಲೆ ಕಾರ್ಯಪ್ರವೃತ್ತವಾಗಿ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಮತ್ತು ಶಾಲಾ, ಕಾಲೇಜು ಯೂನಿವರ್ಸಿಟಿ ಕ್ಯಾಂಪಸ್‌ಗಳಿಗೆ ತಿಂಗಳಿಗೊಮ್ಮೆ ಭೇಟಿ ನೀಡಿ, ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಬೇಕು. ಪುಂಡರ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಬೇಕು. ಇಂತಹ ಘಟನೆಗಳಿಗೆ ಆಸ್ಪದ ಸಿಗದ ಹಾಗೆ ಕಟ್ಟೆಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.ಉಪಾಧ್ಯಕ್ಷ ಹಿದಾಯತುಲ್ ಕಾಗದಗಾರ, ಕಾರ್ಯದರ್ಶಿ ಇರ್ಫಾನ್ ಗುಲಗುಂದಿ, ಮುಸ್ತಾಕ್ ಕಟ್ಟಿಮನಿ, ವಾಸಿಮ್ ರಬಕವಿ, ಮುಜಹಿದ್ ಕಣಕೇನ್ನವರ, ಯಾಸೀನ್ ಹುಬ್ಬಳ್ಳಿ, ನವೀದ್ ಕಮನ್ಗಾರ, ಮುಸ್ತಾಕ್ ಹೊಸಮನಿ, ಜುನೇದ ಢಾಲಾಯತ ಇನ್ನೂ ಅನೇಕರು ಇದ್ದರು.
ಹುಬ್ಬಳ್ಳಿಯಲ್ಲಿ ಯುವತಿಯರ ಕೊಲೆ ಖಂಡಿಸಿ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.