ಸಾರಾಂಶ
ಚಿತ್ರದುರ್ಗ: ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ 6ನೇ ಗ್ಯಾರೆಂಟಿಯಾಗಿ ಗೌರವ ಧನ ಹೆಚ್ಚಿಸುವಂತೆ ಎಐಟಿಯುಸಿವತಿಯಿಂದ ಬುಧವಾರ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್ ಪಾರ್ಕ್‍ನಿಂದ ಮೆರವಣಿಗೆ ಮೂಲಕ ಆಗಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಶ್ರಮ ಸಂಸ್ಕೃತಿ ಪ್ರತಿಪಾದಕ ಮಹಿಳೆಯರ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ದೂರಿದರು.ಒನಕೆ ಓಬವ್ವ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್‍ಬಾಬು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಜನಪರವಾಗಿದ್ದರೂ ವಿವಿಧ ಯೋಜನೆಗಳಲ್ಲಿ ಸ್ಕೀಂ ವರ್ಕರ್ಸ್‍ಗಳಾಗಿ ದುಡಿಯುತ್ತಿರುವ ಮಹಿಳಾ ಸಮುದಾಯವನ್ನು ಕಡೆಗಣಿಸಲಾಗಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‍ನ ಪ್ರಿಯಾಂಕಾಗಾಂಧಿ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರು. ಹಾಗೂ ಸಹಾಯಕಿಯರಿಗೆ 10 ಸಾವಿರ ರು. ಗೌರವ ಧನ ನೀಡುವುದಾಗಿ ವಾಗ್ದಾನ ಮಾಡಿದ್ದರು. ಅದರಂತೆ ಗೌರವಧನ ಸಿಗುತ್ತಿಲ್ಲ. ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಇಡಿ ಗಂಟು ಮೂರು ಲಕ್ಷ ರು.ಗಳನ್ನು ಕೊಡಬೇಕೆಂದು ಒತ್ತಾಯಿಸಿದರು.
ಸರ್ಕಾರದ ಎಲ್ಲ ಯೋಜನೆಗಳ ಜಾರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಶ್ರಮಿಸುತ್ತಿದ್ದಾರೆ. ಅವರಿಗೆ ಕನಿಷ್ಟ ಗೌರವಧನ ನೀಡುವಲ್ಲಿಯೂ ತಾರತಮ್ಯ ಎಸಗಲಾಗಿದೆ. ಪ್ರತಿ ತಿಂಗಳೂ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರೂ ಉಪಯೋಗವಾಗಿಲ್ಲ. ಕಾಂಗ್ರೆಸ್ ಅಧಿನಾಯಕಿ ಪ್ರಿಯಾಂಕ ಗಾಂಧಿ ಅಂಗನವಾಡಿ ಕಾರ್ಯಕರ್ತೆಯರ ನೋವುಗಳ ಕಂಡು ಗೌರವಧನ ಹೆಚ್ಚಳದ ವಾಗ್ದಾನ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಿಯಾಂಕ ಅವರ ಸೂಚನೆಗಳ ಧಿಕ್ಕರಿಸಿದ್ದಾರೆ ಎಂದರು.ಅಸಂಘಟಿತ ಕ್ಷೇತ್ರದ ಮಹಿಳೆಯರಿಗಾಗಿ ಕೇಂದ್ರ ಸರ್ಕಾರದಲ್ಲಿ ಮೀಸಲಿಟ್ಟಿದ್ದ 28 ಸಾವಿರ ಕೋಟಿ ರು. ಬಜೆಟ್‍ನಲ್ಲಿ 10 ಸಾವಿರ ರು.ಗಳನ್ನು ಕಡಿತಗೊಳಿಸಲಾಗಿದೆ. ಬಜೆಟ್ ಗಾತ್ರವನ್ನು 48 ಸಾವಿರ ಕೋಟಿ ರು.ಗಳಿಗೆ ಹೆಚ್ಚಿಸಬೇಕಿತ್ತು. ಕೇಂದ್ರ ಸರ್ಕಾರ 3500 ಹಾಗೂ ರಾಜ್ಯ ಸರ್ಕಾರ 8500 ರು.ಗಳನ್ನು ಕೊಡುತ್ತಿದೆ. ಇದರಿಂದ ಜೀವನ ಮಾಡುವುದು ಕಷ್ಟ. ಯಾವುದೇ ಭದ್ರೆತೆಯಿಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ದುಡಿಯುತ್ತಿದ್ದಾರೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸ್ಕೀಂ ವರ್ಕರ್ಸ್‌ಗಳ ಗೌರವ ಧನ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ನಮ್ಮ ಭವಿಷ್ಯಕ್ಕೆ ಏನಾದರೂ ಕಿಂಚಿ್ತ್ತು ನೆರವಾಗುತ್ತಾರೆಂದು ಭಾವಿಸಿದ್ದರು. ಆದರೆ ಅದು ಹುಸಿಯಾಗಿದೆ. ಮಹಿಳೆಯರ ಮತ್ತಷ್ಟು ಸಂಕಷ್ಟದ ಸನ್ನಿವೇಶಕ್ಕೆ ನೂಕಲ್ಪಟ್ಟಿದ್ದಾರೆಂದು ಸುರೇಶ್ ಬಾಬು ಹೇಳಿದರು.ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾಧ್ಯಕ್ಷೆ ಎಸ್.ಭಾಗ್ಯಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮುನಾಬಾಯಿ, ಖಜಾಂಚಿ ವಿನೋದಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಮ್.ಸಾವಿತ್ರಮ್ಮ, ರಾಧಮ್ಮ, ರತ್ನಮ್ಮ, ಎಐಟಿಯುಸಿ ತಾಲೂಕು ಕಾರ್ಯದರ್ಶಿ ಈ.ಸತ್ಯಕೀರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.