ಜಿಲ್ಲಾ ಪ್ರೇಕ್ಷಣಿಯ ಸ್ಥಳಗಳ ಪಟ್ಟಿಯಲ್ಲಿ ಹತ್ತಿಕುಣಿ ಜಲಾಶಯ ಸೇರಿಸಲು ಆಗ್ರಹ

| Published : Mar 28 2024, 12:49 AM IST

ಜಿಲ್ಲಾ ಪ್ರೇಕ್ಷಣಿಯ ಸ್ಥಳಗಳ ಪಟ್ಟಿಯಲ್ಲಿ ಹತ್ತಿಕುಣಿ ಜಲಾಶಯ ಸೇರಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ-ಸೇಡಂ ರಾಜ್ಯ ಹೆದ್ದಾರಿ ರಸ್ತೆಗೆ ಹೊಂದಿಕೊಂಡಿರುವ ಜಲಾಶಯ ಜಿಲ್ಲಾ ಕೇಂದ್ರದಿಂದ 13ಕಿ.ಮೀ ಅಂತರದಲ್ಲಿದೆ

ಕನ್ನಡಪ್ರಭ ವಾರ್ತೆ ಯಾದಗಿರಿ

ರಾಜ್ಯ ಪ್ರವಾಸೋಧ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಜಿಲ್ಲೆಯ ಪ್ರಮುಖ ಪ್ರೇಕ್ಷಣಿಯ ಸ್ಥಳಗಳ ಪರಿಚಯವಿರುವ ಕಿರು ಹೊತ್ತಿಗೆ ಬಿಡುಗಡೆ ಮಾಡಿದೆ. ಆದರೆ, ಅದರಲ್ಲಿ ಪ್ರಮುಖವಾಗಿ ತಾಲೂಕಿನ ಹತ್ತಿಕುಣಿ ಜಲಾಶಯ ಕೈ ಬಿಟ್ಟಿದ್ದಾರೆ. ಕೂಡಲೇ ಆ ಪಟ್ಟಿಯಲ್ಲಿ ಆ ಸ್ಥಳವನ್ನು ಸೇರಿಸಬೇಕೆಂದು ಹತ್ತಿಕುಣಿ ಭಾಗದ ಜನರು ಆಗ್ರಹಿಸಿದ್ದಾರೆ.

ಯಾದಗಿರಿ-ಸೇಡಂ ರಾಜ್ಯ ಹೆದ್ದಾರಿ ರಸ್ತೆಗೆ ಹೊಂದಿಕೊಂಡಿರುವ ಜಲಾಶಯ ಜಿಲ್ಲಾ ಕೇಂದ್ರದಿಂದ 13ಕಿ.ಮೀ ಅಂತರದಲ್ಲಿದೆ, ಹಚ್ಚ ಹಸಿರು ನಿಸರ್ಗದ ಮಧ್ಯೆ ಇರುವ ಜಲಾಶಯ ಮಳೆಗಾಲದಲ್ಲಿ ನಿಸರ್ಗದ ನೀರಿನಿಂದಲೇ ತುಂಬುತ್ತದೆ. ಆ ಸುಂದರ ಕ್ಷಣಗಳನ್ನು ವೀಕ್ಷಿಸಲು ನೆರೆ ಜಿಲ್ಲೆಯ ಪ್ರವಾಸಿಗರು ಹಾಗೂ ಜಿಲ್ಲೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಜನರು ಜಲಾಶಯಕ್ಕೆ ಬೆಳಗ್ಗೆ ಆಗಮಿಸಿ, ಸಂಜೆಯವರೆಗೆ ಸುಂದರ ಪ್ರಶಾಂತವಾದ ಪರಿಸರದಲ್ಲಿ ಕಾಲ ಕಳೆದು ತೆರಳುತ್ತಾರೆ.

ಆ ಜಲಾಶಯದ ಸುತ್ತಮುತ್ತ ಅಂದಾಜು 1066.71 ಹೆಕ್ಟರ್ ಅರಣ್ಯ ಪ್ರದೇಶವಿದ್ದು, ಪ್ರಾಣಿ-ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ರೈತರಿಗೆ ಅನುಕೂಲವಾಗಲು ಸರ್ಕಾರ 1960ರಲ್ಲಿ ಅಂದಿನ ರಾಜ್ಯ ಸರ್ಕಾರ ನಿಸರ್ಗದ ನೀರು ವ್ಯರ್ಥವಾಗಿ ಹರಿದು ಹೋಗದೆ ಅಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳ ತಂಡ ಆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿ, ಕುಡಿಯುವ ನೀರು ಹಾಗೂ ರೈತರಿಗೆ ನೀರಾವರಿ ಸೌಕರ್ಯ ಕಲ್ಪಿಸಲು ಜಲಾಶಯ ನಿರ್ಮಾಣ ಮಾಡಿ 0.352 ಟಿಎಂಸಿ ನೀರು ಸಂಗ್ರಹವಾಗಲು ಕ್ರಮ ಕೈಗೊಂಡಿದೆ.

ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ ಈ ಜಲಾಶಯದ ನೀರಿನಿಂದಲೇ ಹತ್ತಿಕುಣಿ, ಯಡ್ಡಳ್ಳಿ, ಕಟಗಿ ಶಹಾಪೂರ, ಹೊನಗೇರಾ, ಬಂದಳ್ಳಿ, ಗ್ರಾಮಗಳ ರೈತರ ಅಂದಾಜು 2145 ಹೆಕ್ಟರ್ ಭೂಮಿ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ.

ಈ ಸ್ಥಳವನ್ನು ಅಭಿವೃದ್ಧಿಪಡಿಸಲು ಗುರುಮಠಕಲ್ ಮತಕ್ಷೇತ್ರದ ಮಾಜಿ ಶಾಸಕ ದಿ. ನಾಗನಗೌಡ ಕಂದಕೂರ ತಮ್ಮ ಅಧಿಕಾರವಧಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ₹1 ಕೋಟಿ ಅನುದಾನ ಬಿಡುಗಡೆ ಮಾಡಿಸಿ, ಸುಂದರ ಉದ್ಯಾನವನ, ಚಿಕ್ಕ ಕಾರ್ಯಕ್ರಮ ಮಾಡಲು ವೇದಿಕೆ ಹಾಗೂ ಮಕ್ಕಳು ಆಟವಾಡಲು ಸೂಕ್ತ ಸೌಲಭ್ಯ ಒದಗಿಸಿ, ಜಲಾಶಯಕ್ಕೆ ತೆರಳಲು ಗೇಟ್ ನಿರ್ಮಾಣ ಹಾಗೂ ಕುಡಿಯುವ ನೀರಿನ ಸೌಲಭ್ಯ ಕೂಡ ಒದಗಿಸಲಾಗಿದೆ.

ಪ್ರತಿ ವರ್ಷ ಜಲಾಶಯ ಮಳೆಗಾಲದಲ್ಲಿ ತುಂಬಿ, ಬೇಸಿಗೆ ಕಳೆಯುವವರೆಗೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಿರುತ್ತದೆ, ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಅಲ್ಲಿಗೆ ಬರುವ ಪ್ರವಾಸಿಗರಿಗೆ ಜಲಾಶಯದಲ್ಲಿ ಆಧುನಿಕ ತಂತ್ರಜ್ಞಾನದ ಬೋಟಿಂಗ್ ವ್ಯವಸ್ಥೆ ಮಾಡಿದರೆ, ಹೆಚ್ಚಿನ ಆದಾಯ ಕೂಡ ಬರುತ್ತದೆ. ಆದರೆ ಈ ವಿಷಯದಲ್ಲಿ ಜಿಲ್ಲಾಡಳಿತ ಹಾಗೂ ಇಲಾಖೆ ವಿಫಲವಾಗಿದೆ ಎಂದು ವಿಜಯಶಂಕರ ಹಳಿಮನಿ ಆರೋಪಿಸಿದ್ದಾರೆ.

ರಾಜ್ಯ ಪ್ರವಾಸೋದ್ಯಮ ಪಟ್ಟಿಯಲ್ಲಿ 319 ಪ್ರೇಕ್ಷಣಿಯ ಸ್ಥಳ ಗುರುತಿಸಿ, ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಹತ್ತಿಕುಣಿ ಜಲಾಶಯ ಪಟ್ಟಿಯಲ್ಲಿ ಇಲ್ಲ, ಈ ಕುರಿತು ಪ್ರವಾಸೋಧ್ಯಮ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾತನಾಡಿದಾಗ, ನಾವು ಕಳೆದ ವರ್ಷ ಪ್ರವಾಸೋದ್ಯಮ ಪಟ್ಟಿಯಲ್ಲಿ ಈ ಸ್ಥಳವನ್ನು ಸೇರ್ಪಡೆ ಮಾಡಬೇಕೆಂದು ಸಮಗ್ರ ಮಾಹಿತಿ ಇರುವ ಪ್ರಸ್ತಾವನೆ ಸರ್ಕಾರಕ್ಕೆ ಕಳಿಸಿದ್ದೇವೆ. ಅದು ಇನ್ನೂ ಗೆಜೆಟ್‌ನಲ್ಲಿ ಸೇರಿಸಿಲ್ಲ, ಕ್ರಮ ಕೈಗೊಳ್ಳಲು ಮತ್ತೊಮ್ಮೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.