ಕುರುಬ ಸಮುದಾಯ ಎಸ್​​ಟಿಗೆ ಸೇರಿಸಲು ಆಗ್ರಹ: 28ರಂದು ಪ್ರತಿಭಟನೆ

| Published : Dec 25 2023, 01:31 AM IST / Updated: Dec 25 2023, 01:32 AM IST

ಸಾರಾಂಶ

2014ರಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕುಲಶಾಸ್ತ್ರೀಯ ವರದಿ ನಂತರ ಮೂರು ಬಾರಿ ಪೂರಕ ದಾಖಲೆಯೊಳಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು. ಬೀದರ್‌ ಮತ್ತು ಕಲಬುರಗಿ-ಯಾದಗಿರಿ ಜಿಲ್ಲೆಯ ಗೊಂಡ ಪರ್ಯಾಯ ಪದ ಕುರುಬವನ್ನು ಎಸ್‌ಟಿ ಪಟ್ಟಿಯಲ್ಲಿ ಜಾರಿಗೊಳಿಸುವಂತೆ ಆಗ್ರಹ.

ಕನ್ನಡಪ್ರಭ ವಾರ್ತೆ ಶಹಾಪುರ ಬೀದರ್‌ ಮತ್ತು ಕಲಬುರಗಿ-ಯಾದಗಿರಿ ಜಿಲ್ಲೆಯ ಗೊಂಡ ಪರ್ಯಾಯ ಪದ ಕುರುಬವನ್ನು ಎಸ್‌ಟಿ ಪಟ್ಟಿಯಲ್ಲಿ ಜಾರಿಗೊಳಿಸುವಂತೆ ಆಗ್ರಹಿಸಿ, ಡಿ.28 ರಂದು ನಗರದ ಬಸವೇಶ್ವರ ವೃತ್ತದ ಬಳಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ಕುರುಬ ಸಂಘದ ತಾಲೂಕಾಧ್ಯಕ್ಷ ಡಾ. ಭೀಮಣ್ಣ ಮೇಟಿ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಟ್ಟದ ಕುರುಬ ಸಮಾಜದ ಮುಖಂಡರು ಪೂರ್ವಭಾವಿ ಸಭೆ ನಡೆಸಿ, ಹೋರಾಟದ ಬಿತ್ತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಮುದ್ದುಗೊಂಡ, ಬೀರ್ಗೊಂಡ, ಆದಿಗೊಂಡ, ಅನಾದಿಗೊಂಡ, ಪದ್ಮಗೊಂಡ, ಬೊಮ್ಮಗೊಂಡೆಶ್ವರ ದೇವರ ಪೌರಾಣಿಕ ಇತಿಹಾಸ ಹಿನ್ನೆಲೆ ಕುರುಬರನ್ನು ಪರ್ವತ, ಬೆಟ್ಟ, ಅರಣ್ಯದಲ್ಲಿ ವಾಸಿಸುತ್ತಿದ್ದರಿಂದ ಗೊಂಡ ಎಂದು ಕರೆಯುತ್ತಾರೆ.

ಕೇಂದ್ರ ಸರ್ಕಾರದ ಆದೇಶದ ಮೇರೆಗೆ 2014ರಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕುಲಶಾಸ್ತ್ರೀಯ ವರದಿ ನಂತರ ಮೂರು ಬಾರಿ ಪೂರಕ ದಾಖಲೆಯೊಳಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ನಮ್ಮ ಸಮುದಾಯದ ರಾಜ್ಯ ಮುಖಂಡರು ಹಾಗೂ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ಮಹಾ ಸ್ವಾಮೀಜಿ ಭೇಟಿಯಾಗಿ ಮನವಿ ಸಲ್ಲಿಸಲಾಗಿದ್ದರು ಯಾವುದೇ ಪ್ರಯೋಜನವಾಗಿಲ್ಲ.

ಚಿಂಚೋಳಿ ಮತ್ತು ಬಸವಕಲ್ಯಾಣ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಕೇಂದ್ರ ಸರ್ಕಾರದಲ್ಲಿ ಕುರುಬರ ಎಸ್‌ಟಿ ಬೇಡಿಕೆ ಈಡೇರಿಸುವ ಭರವಸೆ ನೀಡಿ ಚುನಾವಣೆಯಲ್ಲಿ ಲಾಭ ಪಡೆದಿರುತ್ತಾರೆ. ಆದರೂ ಕೊಟ್ಟಿರುವ ಭರವಸೆ ಈಡೇರಿಲ್ಲ. ಈಗ 2024ರಲ್ಲಿ ಲೋಕಸಭಾ ಚುನಾವಣೆ ಹತ್ತಿರ ಬಂದರೂ ಕುರುಬರ ಎಸ್‌ಟಿ ಬೇಡಿಕೆ ಈಡೇರದ ಕಾರಣ ಕೇಂದ್ರ ಸರ್ಕಾರವು ಕುರುಬರಿಗೆ ನಂಬಿಕೆ ದ್ರೋಹ ಮಾಡಿದೆ. ಆದ್ದರಿಂದ ನಮ್ಮ ಕುರುಬರ ನ್ಯಾಯಯುತ ಬೇಡಿಕೆ ಈಡೇರುವವರೆಗೂ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆಗೆ ಮುಂದಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದುಕುರ್ ಮಾತನಾಡಿ, ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಸೇರಿಸಬೇಕೆಂಬುದು ದಶಕಗಳ ಕೂಗು. ಕುರುಬರನ್ನು ಪರಿಶಿಷ್ಟ ಪಂಗಡ (ಎಸ್‌ಟಿ)ಗೆ ಸೇರಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಕೇಂದ್ರ, ರಾಜ್ಯ ಸರ್ಕಾರಗಳಿಗೆ ಬುಡಕಟ್ಟು ಅಭಿವೃದ್ಧಿ ಇಲಾಖೆಗಳಿಗೆ ಎಸ್‌ಟಿಗೆ ಸೇರ್ಪಡೆ ಮಾಡಬೇಕೆಂದು ನಿರಂತರವಾಗಿ ಮನವಿ ಸಲ್ಲಿಸುತ್ತಲೇ ಬಂದಿದೆ. ಆದಾಗ್ಯೂ ನಮ್ಮ ಬೇಡಿಕೆ ಪರಿಗಣಿಸದೇ ಇರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಕುರುಬ ಸಮಾಜದ ಹಿರಿಯ ಮುಖಂಡ ಗಿರೆಪ್ಪ ಗೌಡ ಬಾಣತಿಹಾಳ್, ಬಸವರಾಜ್ ವಿಭೂತಿಹಳ್ಳಿ, ವೀರನಗೌಡ ಮಲ್ಲವಾದಿ, ಡಾ. ಹೈಯಾಳಪ್ಪ ಸುರಪುರ, ಸಿದ್ದಣ್ಣ ದಿಗ್ಗಿ, ನ್ಯಾಯವಾದಿ ನಿಂಗಣ್ಣ ಸಗರ್, ದೇವಿಂದ್ರಪ್ಪ ಮುನಮಟ್ಟಿಗೆ ನಾಗನಗೌಡ ಬಿದರಾಣಿ ಶರಬಣ್ಣ ರಸ್ತಾಪೂರ, ಮಾಳಿಂಗರಾಯ ಅಯ್ಯಣ್ಣ ಬಿರಾದರ್ ಸೇರಿ ಅನೇಕ ಮುಖಂಡರು ಭಾಗವಹಿಸಿದ್ದರು.