ಹೈ-ಕ ವಿಮೋಚನಾ ದಿನಾಚರಣೆ ಅಂಗವಾಗಿ ಗುರುವಾರ ಕೊಪ್ಪಳ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಧ್ವಜಾರೋಹಣ ನೆರವೇರಿಸಿದರು.
ಕೊಪ್ಪಳ: ಹೈದರಾಬಾದ್ ಕರ್ನಾಟಕ (ಹೈ-ಕ) ವಿಮೋಚನೆಗೆ ನಿರ್ಣಾಯಕ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಗಳನ್ನು ಶಾಶ್ವತವಾಗಿ ಸ್ಮರಿಸುವ ನಿಟ್ಟಿನಲ್ಲಿ ಕೊಪ್ಪಳ ನಗರದಲ್ಲಿ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಒತ್ತಾಯಿಸಿದರು.
ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಗುರುವಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹೈ-ಕ ವಿಮೋಚನೆಗೊಂಡು ಏಳು ದಶಕಗಳು ಕಳೆದರೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದಿನ ಹೋರಾಟದ ಸಂದರ್ಭದಲ್ಲಿ ಕವಲೂರಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಹುತಾತ್ಮರಾದ ವೀರಯೋಧರ ಸ್ಮರಣಾರ್ಥ ಆ ಗ್ರಾಮದಲ್ಲಿ ಸ್ಮಾರಕ ನಿರ್ಮಿಸಬೇಕು. ಸರ್ಕಾರ ಈ ಕೆಲಸಕ್ಕೆ ಮುಂದಾಗದಿದ್ದರೆ ಜೆಡಿಎಸ್ ವತಿಯಿಂದ ಸ್ಮಾರಕ ನಿರ್ಮಿಸಲಾಗುವುದು ಎಂದು ಹೇಳಿದರು.ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಮಾತನಾಡಿ, ಹೈ-ಕ ಪ್ರದೇಶಕ್ಕೆ ವಿಶೇಷ ಸೌಕರ್ಯಗಳು ಬೇಕೆಂಬ ಹೋರಾಡಲು ತಮ್ಮ ಸರ್ವಸ್ವವನ್ನೇ ಧಾರೆಯೆರೆದ ವೈಜನಾಥ ಪಾಟೀಲ್ ಅವರನ್ನು ಸರ್ಕಾರ ಮರೆತಿದೆ. ಸಂವಿಧಾನಾತ್ಮಕವಾಗಿ ದೊರೆಯಬೇಕಾದ ಸವಲತ್ತುಗಳು ಇಂದಿಗೂ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂದು ಹೇಳಿದರು.
ಯುವ ಮುಖಂಡ ಬಸವರಾಜ ಮಾತನಾಡಿ, ಸರ್ಕಾರದ ನಿರ್ಧಾರಗಳಿಗಾಗಿ ಕಾಯದೆ ಈ ಭಾಗಕ್ಕೆ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಾಯಕರು ಮುಂದಾಗಬೇಕು ಎಂದು ಹೇಳಿದರು.ಹೋರಾಟಗಾರರ ಕುರಿತು ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ ಮಾತನಾಡಿದರು. ಹೈ-ಕ ವಿಮೋಚನಾ ಸಂಘರ್ಷದ ಕುರಿತು ಎಸ್‌ವಿಸಿ ಶಿಕ್ಷಣ ಸಂಸ್ಥೆಗಳ ಸಿಇಒ ಡಾ. ಜಗದೀಶ ಅಂಗಡಿ ಉಪನ್ಯಾಸ ನೀಡಿದರು.
ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಎಸ್‌ಟಿ ಘಟಕದ ಅಧ್ಯಕ್ಷ ರಮೇಶ ಡಂಬ್ರಳ್ಳಿ, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ನಗರ ಘಟಕದ ಮಹಿಳಾ ಅಧ್ಯಕ್ಷೆ ನಿರ್ಮಲಾ ಮೇದಾರ, ನಗರ ಮಹಿಳಾ ಘಟಕದ ಗೌರವ ಅಧ್ಯಕ್ಷೆ ರತ್ನಮ್ಮ ಹಿರೇಮಠ, ತಾಲೂಕು ಎಸ್‌ಸಿ ಘಟಕದ ಅಧ್ಯಕ್ಷ ಸುರೇಶ ದದಗಲ್, ಜಿಲ್ಲಾ ಕೈಗಾರಿಕಾ ಘಟಕದ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಂಜುನಾಥ ಮಾಲಿಪಾಟೀಲ್, ಮುಖಂಡರಾದ ಭಾಗ್ಯಲಕ್ಷ್ಮೀ, ಸಿದ್ದು ಪಾಟೀಲ್, ಭರತಕುಮಾರ ಗೊಂದಿಹೊಸಳ್ಳಿ, ಶ್ರೀನಿವಾಸ ಗೊಂದಳ್ಳಿ ಉಪಸ್ಥಿತರಿದ್ದರು.