ಕೆರೆತೊಣ್ಣೂರು ಕೆರೆಯಲ್ಲಿ ಮೀನುಗಾರಿಕೆ ಮಾಡಲು ನೇರವಾಗಿ ನಮ್ಮಂತ ಬಡ ಮೀನುಗಾರರಿಗೆ ಸರ್ಕಾರದಿಂದ ಪರವಾನಗಿ ನೀಡಬೇಕು. ಸುತ್ತಮುತ್ತಲಿನ ಗ್ರಾಮದ ಅನೇಕ ಮೀನುಗಾರ ಕುಟುಂಬಸ್ಥರ ಕುಲ ಕಸುಬು ಮೀನು ಹಿಡಿಯುವುದು ಕಾರ್ಯವಾಗಿದೆ. ಇದೇ ಕಾರ್ಯದಲ್ಲಿ ನಮ್ಮ‌ ಬದುಕು ನಿರ್ವಹಣೆ ಆಗುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕೆರೆತೊಣ್ಣೂರು ಗ್ರಾಮದ ತೊಣ್ಣೂರು ಕೆರೆಯಲ್ಲಿ ಮೀನು ಹಿಡಿಯಲು ಮೀನುಗಾರರಿಗೆ ಸರ್ಕಾರದಿಂದ ಪರವಾನಗಿ ನೀಡಬೇಕೆಂದು ಒತ್ತಾಯಿ, ವಿವಿಧ ಗ್ರಾಮಗಳ ಮೀನುಗಾರರು ಪಟ್ಟಣದ ತಾಲೂಕು ಆಡಳಿತ ಸೌಧ ಹಾಗೂ ಮೀನುಗಾರಿಕೆ ಇಲಾಖೆ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲೂಕಿನ ತೊಣ್ಣೂರುಕೆರೆ ಅಕ್ಕಪಕ್ಕದ ಕೆರೆತೊಣ್ಣೂರು, ಸಣಬದಕೊಪ್ಪಲು, ಕಾಮನಾಯಕನಹಳ್ಳಿ, ತಿರುಮಲಾಪುರ, ಲಕ್ಷ್ಮೀಸಾಗರ, ಪಟ್ಟಣಗೆರೆ, ಸಣಬ, ಕಡಬ ಗ್ರಾಮದ ವ್ಯಾಪ್ತಿಯ ಮೀನುಗಾರರು, ತೆಪ್ಪ, ಮೀನು ಬಲೆಯೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿ, ನಂತರ ಮೆರವಣಿಗೆ ಮೂಲಕ ಮೀನುಗಾರಿಕೆ ಇಲಾಖೆಗೆ ಮುತ್ತಿಗೆ ಹಾಕಿ ಲೈಸೆನ್ಸ್ ನೀಡಬೇಕೆಂದು ಒತ್ತಾಯಿಸಿದರು.

ಮುಖಂಡ, ವಕೀಲ ಮಧು ಮಾತನಾಡಿ, ಕೆರೆತೊಣ್ಣೂರು ಕೆರೆಯಲ್ಲಿ ಮೀನುಗಾರಿಕೆ ಮಾಡಲು ನೇರವಾಗಿ ನಮ್ಮಂತ ಬಡ ಮೀನುಗಾರರಿಗೆ ಸರ್ಕಾರದಿಂದ ಪರವಾನಗಿ ನೀಡಬೇಕು. ಸುತ್ತಮುತ್ತಲಿನ ಗ್ರಾಮದ ಅನೇಕ ಮೀನುಗಾರ ಕುಟುಂಬಸ್ಥರ ಕುಲ ಕಸುಬು ಮೀನು ಹಿಡಿಯುವುದು ಕಾರ್ಯವಾಗಿದೆ. ಇದೇ ಕಾರ್ಯದಲ್ಲಿ ನಮ್ಮ‌ ಬದುಕು ನಿರ್ವಹಣೆ ಆಗುತ್ತಿದೆ ಎಂದರು.

ಈ ಕೆರೆಯನ್ನು ನಿರ್ಮಿಸಲು ನಮ್ಮಂತ ಸಣ್ಣಪುಟ್ಟ ಬಡ ಕುಟುಂಬಸ್ಥರ ಜಮೀನು ವಶಕ್ಕೆ ತೆಗೆದುಕೊಂಡು ಬೃಹತ್ ಕೆರೆ ನಿರ್ಮಿಸಲಾಗಿದೆ. ಕೆರೆ ನಿರ್ಮಿಸಲು ನಮ್ಮ ತ್ಯಾಗವೂ ಹೊಂದಿದೆ. ಆದರೆ, ಕೆರೆಯನ್ನು ಎರಡು ಮೀನುಗಾರಿಕೆ ಸಹಕಾರ ಸಂಘ ರಚಿಸಿಕೊಂಡು ಸರ್ಕಾರಿ ಅಧಿಕಾರಿಗಳ ಜೊತೆ ಶಾಮೀಲಾಗಿ ಕೆರೆ ಗುತ್ತಿಗೆ ಪಡೆದುಕೊಂಡು ನಮ್ಮಂತ ಬಡ ಕುಟುಂಬಸ್ಥರಿಂದ ಮೀನುಗಾರಿಕೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಮೀನುಗಾರಿಕೆ ಮಾಡಲು ಅನುಮತಿ ಕಾರ್ಯಚಟುವಟಿಕೆ ನಡೆಸುತ್ತಿರುವ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮೀನುಗಾರರಿಗೆ ಯಾವುದೇ ರೀತಿಯ ಅಭಿವೃದ್ಧಿಯಾಗಲಿ, ಜೀವ ವಿಮೆಯಾಗಲಿ ಮಾಡಿಲ್ಲ. ಈ ಸಂಘವನ್ನು ಕಳೆದ 2023ರಲ್ಲೇ ಮಂಡ್ಯ ಸಹಕಾರ ನಿಬಂಧಕರು ಸೂಪರ್ ಸೀಡ್ ಮಾಡಿ ಆದೇಶಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದಾರೆ ಎಂದರು.

ಈ ಹಿಂದೆ ಮೀನು ಹಿಡಿಯುವ ಗುತ್ತಿಗೆ ಪಡೆದಿದ್ದ ಕೆರೆತೊಣ್ಣೂರು ಸಹಕಾರ ಸಂಘ ಹಾಗೂ ಅಂಬೇಡ್ಕರ್ ಸಹಕಾರ ಸಂಘ ಅಥವಾ ಯಾರಿಗೂ ಗುತ್ತಿಗೆ ನೀಡಬಾರದು. ಬದಲಾಗಿ ನಮ್ಮ ಬಡ ಕುಟುಂಬಸ್ಥರಾದ ಕುಲ ಕಸುಬು ಮೀನುಗಾರರಿಗೆ ಸರ್ಕಾರದಿಂದ ಮೀನು ಹಿಡಿಯಲು ಅನುಮತಿ ಕೊಡಿಸಬೇಕೆಂದು ಮನವಿ ಮಾಡಿಕೊಂಡರು.

ಕೆಆರ್‌ಎಸ್ ಜಲಾಶಯದ ಮೀನುಗಾರರಿಗೆ 2017ರಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿದಂತಹ ತೀರ್ಪಿನಂತೆ ಮೀನುಗಾರಿಕೆ ಇಲಾಖೆಯು ಅಧಿಕೃತವಾಗಿ ಲೈಸೆನ್ಸ್ ನೀಡುವಂತೆ ಆದೇಶಿಸಬೇಕು ಎಂದು ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಸೀಲ್ದಾರ್ ಪ್ರಕಾಶ್, ತಾಲೂಕು ಕಚೇರಿಯ ಶಿರಸ್ತೇದಾರ್ ಮೋಹನ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಪುಷ್ಪಲತ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮೀನುಗಾರರಾದ ಗುರು, ಮಧು, ಗಿರೀಶ, ಹರೀಶ, ನವೀನ, ರಮೇಶ, ಲಕ್ಷ್ಮಣ, ಚನ್ನಕೇಶವ, ರಾಜಕುಮಾರ್, ಪ್ರದೀಪ, ಮಹೇಶ್ ಸೇರಿದಂತೆ ಅನೇಕರಿದ್ದರು.