ಸಾರಾಂಶ
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಪರಿಶಿಷ್ಟ ಜಾತಿಯವರಿಗೆ ಇಲ್ಲಿಯವರೆಗೆ ಟಿಕೆಟ್ ನೀಡಿಲ್ಲ.
ಕನ್ನಡಪ್ರಭ ವಾರ್ತೆ ರಾಮದುರ್ಗ
ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಎಸ್‌ಸಿ/ಎಸ್‌ಟಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಂತಕುಮಾರ ಬ್ಯಾಕೂಡ ಅವರಿಗೆ ನೀಡುವಂತೆ ಎಸ್‌ಸಿ/ಎಸ್‌ಟಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಉಪಾಧ್ಯಕ್ಷೆ ಲಕ್ಷ್ಮೀ ನಾಗಣ್ಣವರ ಮನವಿ ಮಾಡಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಪರಿಶಿಷ್ಟ ಜಾತಿಯವರಿಗೆ ಇಲ್ಲಿಯವರೆಗೆ ಟಿಕೆಟ್ ನೀಡಿಲ್ಲ. ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ 6 ಲಕ್ಷ ಮತಗಳಿದ್ದರೂ ವಿಧಾನ ಪರಿಷತ್, ವಿಧಾನಸಭೆ ಮತ್ತು ನಿಗಮ ಮಂಡಳಿಗೂ ಕಡೆಗಣಿಸಿ ಅನ್ಯಾಯವಾಗುತ್ತಿದೆ. ಈ ಸಲ ಅನಂತಕುಮಾರ ಬ್ಯಾಕೂಡ ಅವರಿಗೆ ಟಿಕೆಟ್ ನೀಡುವ ಮೂಲಕ ಮೊದಲಿನಿಂದಲೂ ಕಾಂಗ್ರೆಸ್ ಬೆಂಬಲಿಸಿರುವ ಈ ಜನಾಂಗಕ್ಕೆ ನ್ಯಾಯ ಒದಗಿಸಿಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಜಿಲ್ಲೆಯ ಸಚಿವ ಸತೀಶ ಜಾರಕಿಹೋಳಿ, ಲಕ್ಷ್ಮೀ ಹೆಬ್ಬಾಳಕರ, ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಅವರನ್ನು ಒತ್ತಾಯಿಸಿದರು. ಒಂದು ವೇಳೆ ಟಿಕೆಟ್ ನೀಡದಿದ್ದರೆ ಚುನಾವಣೆಯಲ್ಲಿ ನಮ್ಮ ನಿರ್ಧಾರ ಏನು ಎನ್ನುವುದನ್ನು ಚರ್ಚೆ ಮಾಡಿ ನಿರ್ಧರಿಸಬೇಕಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಸಿ,ಎಸ್‌ಟಿ ಜಿಲ್ಲಾ ಮೋರ್ಚಾದ ಉಪಾಧ್ಯಕ್ಷ ರಮೇಶ ರಜಪೂತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಮದರಂಗಿ, ಸಾಗರ ಮುನವಳ್ಳಿ, ದಲಿತ ಮುಖಂಡ ಬಿ.ಆರ್. ದೊಡಮನಿ, ಧರ್ಮಪ್ಪ ಮಾದರ ಸೇರಿದಂತೆ ಹಲವರಿದ್ದರು.