ಹಾಸ್ಟೆಲ್ ಹೊರಗುತ್ತಿಗೆ ನೌಕರರ ಕಾಯಂ ಮಾಡಲು ಆಗ್ರಹ

| Published : May 16 2025, 01:55 AM IST

ಹಾಸ್ಟೆಲ್ ಹೊರಗುತ್ತಿಗೆ ನೌಕರರ ಕಾಯಂ ಮಾಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಗುತ್ತಿಗೆದಾರರು ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಕೊಡಬೇಕಾದ ಸೌಲಭ್ಯಗಳನ್ನು ಕೊಡದೆ ಹೊರಗುತ್ತಿಗೆ ನೌಕರರನ್ನು ಶೋಷಣೆ ಮಾಡುತ್ತಿದ್ದಾರೆ.

ಹಾವೇರಿ: ಕಳೆದ ಇಪ್ಪತ್ತು ವರ್ಷಗಳಿಂದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ನೌಕರರನ್ನು ಕಾಯಂ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ. ಹನುಮೇಗೌಡ ಸರ್ಕಾರವನ್ನು ಒತ್ತಾಯಿಸಿದರು.ನಗರದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಎಐಎಡಬ್ಲ್ಯುಎ ಸಂಯೋಜಿತ ಕರ್ನಾಟಕ ರಾಜ್ಯ ಹಾಸ್ಟೆಲ್ ಮತ್ತು ವಸತಿ ಶಾಲಾ-ಕಾಲೇಜು ಹೊರಗುತ್ತಿಗೆ ನೌಕರರ ಸಂಘಟನೆಯ ಎರಡನೇ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಗುತ್ತಿಗೆದಾರರು ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಕೊಡಬೇಕಾದ ಸೌಲಭ್ಯಗಳನ್ನು ಕೊಡದೆ ಹೊರಗುತ್ತಿಗೆ ನೌಕರರನ್ನು ಶೋಷಣೆ ಮಾಡುತ್ತಿದ್ದಾರೆ. ಇಎಸ್ಐ, ಪಿಎಫ್, ನೇಮಕಾತಿ ಆದೇಶ ಪ್ರತಿ, ಸರ್ವೀಸ್ ಸರ್ಟಿಫಿಕೇಟ್ ಯಾವುದೇ ದಾಖಲೆಗಳನ್ನು ಕೊಡುತ್ತಿಲ್ಲ. ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ಕೊಡುತ್ತಿದ್ದಾರೆ. ಗುತ್ತಿಗೆದಾರರ ಶೋಷಣೆ ತಪ್ಪಿಸಲು ಸರ್ಕಾರ ಎಲ್ಲ ಹಾಸ್ಟೆಲ್ ಹೊರಗುತ್ತಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಕೊಡಬೇಕು ಎಂದರು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಹಲವು ವರ್ಷಗಳಿಂದ ಹಾಸ್ಟೆಲ್‌ ಹಾಗೂ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆಯಡಿ ಯಾವುದೇ ಭದ್ರತೆಯಿಲ್ಲದೇ ದುಡಿಯುತ್ತಿದ್ದರೂ ಕನಿಷ್ಠ ವೇತನ, ಭದ್ರತೆ ಸಿಗದಿರುವುದು ನೋವಿನ ಸಂಗತಿ. ಸಂಘಟನೆ ಹಲವು ವರ್ಷಗಳಿಂದ ಕನಿಷ್ಠ ವೇತನಕ್ಕಾಗಿ ಹೋರಾಟ ಮಾಡಿರುವ ಫಲವಾಗಿ ಕನಿಷ್ಠ ವೇತನ ಕರಡು ಅಧಿಸೂಚನೆ ಸಿದ್ಧಪಡಿಸಿದೆ. ಯಾವುದೇ ಕಾರಣಕ್ಕೂ ಇದನ್ನು ತಡೆಹಿಡಿಯದೇ, ಯಾವುದೇ ವಿಳಂಬ ನೀತಿಯನ್ನು ಅನುಸರಿಸದೇ ಕೂಡಲೇ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ ವರಗಪ್ಪನವರ ಮಾತನಾಡಿ, ಬಾಬಾ ಸಾಹೇಬರು ಹೇಳಿದಂತೆ ನಾವು ಶಿಕ್ಷಣ, ಸಂಘಟನೆ, ಹೋರಾಟ ಧ್ಯೇಯದಡಿ ಕೆಲಸ ಮಾಡಬೇಕಿದೆ. ನಿಮ್ಮ ಹೋರಾಟದ ಫಲವಾಗಿ ಕನಿಷ್ಠವೇತನ ಜಾರಿಯಾಗಿದೆ. ಬೀದರ್ ಮಾದರಿಯಲ್ಲಿ ಸಹಕಾರಿ ಸಂಘ ಮಾಡಲು ನಮ್ಮ ಹಾವೇರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದೆ. ಬರುವ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಶೋಕ ಗಡ್ಡಿಗೌಡರ ಮಾತನಾಡಿ, ಹೊರಗುತ್ತಿಗೆ ನೌಕರರು ತಮ್ಮ ಮಕ್ಕಳನ್ನು ಬಿಟ್ಟು ಇಲಾಖೆಯ ಹಾಸ್ಟೆಲ್ ಮಕ್ಕಳ ಏಳಿಗೆಗಾಗಿ ಪರಿಶ್ರಮ ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮ ಇಲಾಖೆಯಲ್ಲಿರುವ ಹೊರಗುತ್ತಿಗೆಯವರನ್ನು ನಮ್ಮ ಕುಟುಂಬದವರಂತೆ ಪರಿಗಣಿಸಿ ಅವರಿಗೆ ಸಮಸ್ಯೆಗಳಾಗದಂತೆ ನೋಡಿಕೊಳ್ಳೊತ್ತೇವೆ ಎಂದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿದರು. ರಮೇಶ ಗುಳ್ಳಮ್ಮನವರ ನಿರ್ವಹಿಸಿದರು. ಫಕ್ಕಿರೇಶ ಪೂಜಾರ ಸ್ವಾಗತಿಸಿದರು. ಲಿಂಗರಾಜ ದುರ್ಗದ ವಂದಿಸಿದರು.ಹಿರಿಯ ಹೋರಾಟಗಾರರಾದ ರುದ್ರಪ್ಪ ಜಾಬೀನ, ರಾಜ್ಯ ಉಪಾಧ್ಯಕ್ಷರಾದ ಶಾಂತಾ ವಿ. ಗಡ್ಡಿಯವರ, ಜಿಲ್ಲಾ ಮುಖಂಡರಾದ ಎಚ್.ಎಚ್ ನದಾಫ, ಶಿವರಾಜ ಹಿತ್ಲರ್, ಶೋಭಾ ಡೊಳ್ಳೇಶ್ವರ, ಸುನೀತಾ ಬಡನಾಯ್ಕರ, ಸುನೀಲ್ ಎಲ್, ಶೇಖಪ್ಪ ಮಾಗಳಹಳ್ಳಿ, ಅನಸೂಯ ಹಿರೆತಿಮ್ಮಣ್ಣವರ, ಮಹಾಂತೇಶ ಬಳ್ಳೂಡಿ, ಮಾರುತಿ ಎಸ್, ಅಲ್ನಾಬಿ ನದಾಪ್, ರೇಖಾ ಮಾಳಗಿಮನಿ, ವೆಂಕಟೇಶ ಭಜಂತ್ರಿ, ಲಲಿತಾ ಮಿರ್ಜಿ ಇತರರು ಉಪಸ್ಥಿತರಿದ್ದರು.