ವಿವಿಧ ಬೇಡಿಕೆ ಈಡೇರಿಸಲು ಆಗ್ರಹ: ಚಿಕ್ಕಮಗಳೂರಿನಲ್ಲಿ ಆಟೋ ಸಂಚಾರ ಬಂದ್‌

| Published : Feb 29 2024, 02:07 AM IST

ವಿವಿಧ ಬೇಡಿಕೆ ಈಡೇರಿಸಲು ಆಗ್ರಹ: ಚಿಕ್ಕಮಗಳೂರಿನಲ್ಲಿ ಆಟೋ ಸಂಚಾರ ಬಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಟೋ ಚಾಲಕರು ಬುಧವಾರ ಚಿಕ್ಕಮಗಳೂರಿನಲ್ಲಿ ಆಟೋ ಸಂಚಾರ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

- ರಸ್ತೆ ತಡೆ, ಮಾನವ ಸರಪಳಿ ರಚಿಸಿ ಪ್ರತಿಭಟನೆ । ಹೊಸ ಆಟೋಗಳಿಗೆ ಪರವಾನಗಿ ನೀಡಬಾರದೆಂದು ಒತ್ತಾಯ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಟೋ ಚಾಲಕರು ಬುಧವಾರ ಚಿಕ್ಕಮಗಳೂರಿನಲ್ಲಿ ಆಟೋ ಸಂಚಾರ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಆಟೋ ಸಂಚಾರ ಬಂದ್‌ ಮಾಡುವ ಮೂಲಕ ಜಿಲ್ಲಾಡಳಿತದ ಗಮನ ಸೆಳೆದರು. ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಆಟೋ ಚಾಲಕರು ಮತ್ತು ಮಾಲೀಕರಿಗೆ ಕನ್ನಡ ಪರ ಸಂಘಟನೆ ಗಳ ಮುಖಂಡರು ಸಾಥ್‌ ನೀಡಿದರು. ಮೆರವಣಿಗೆ ತೆರಳುವ ಸಂದರ್ಭದಲ್ಲಿ ಇಲ್ಲಿನ ಹನುಮಂತಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ಬಳಿಕ ರಸ್ತೆ ತಡೆ ನಡೆಸಿ ಅಲ್ಲಿಂದ ಎಂ.ಜಿ. ರಸ್ತೆಯ ಮೂಲಕ ಆಜಾದ್‌ ಪಾರ್ಕ್‌ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

ಚಿಕ್ಕಮಗಳೂರು ನಗರದಲ್ಲಿ ಸುಮಾರು 4 ಸಾವಿರ ಆಟೋಗಳಿವೆ. ಇದೊಂದು ಚಿಕ್ಕ ನಗರ, ಇಲ್ಲಿಗೆ ಈಗಾಗಲೇ ಆಟೋ ಗಳಿಗೆ ಕೊಟ್ಟಿರುವ ಪರವಾನಗಿ ಹೆಚ್ಚಿವೆ. ಇನ್ನು ಕೂಡ ಪರವಾನಗಿ ಕೊಡಲಾಗುತ್ತಿದೆ. ಆಟೋಗಳ ಸಂಖ್ಯೆ ಹೆಚ್ಚಳ ವಾಗಿದ್ದರಿಂದ ಚಾಲಕರು ಮತ್ತು ಮಾಲೀಕರಿಗೆ ಆರ್ಥಿಕವಾಗಿ ತುಂಬಾ ತೊಂದರೆಯಾಗಿದೆ. ಜೀವನ ನಿರ್ವಹಣೆ ಕಷ್ಟ ವಾಗಿದೆ. ಈ ಹಿಂದೆ ಹಲವು ಬಾರಿ ಜಿಲ್ಲಾಡಳಿತವನ್ನು ಆಗ್ರಹಿಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಈ ಬಾರಿ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಅನಧಿಕೃತವಾಗಿ ಬಾಡಿಗೆ ದ್ವಿಚಕ್ರ ವಾಹನಗಳು ಸಂಚರಿಸುತ್ತಿವೆ. ಹಾಗೆಯೇ ಪರವಾನಗಿ ಇಲ್ಲದೆ ಕೆಲವು ಹಳದಿ ನಂಬರ್ ಪ್ಲೇಟ್‌ನ ಸಂಚರಿಸುತ್ತಿವೆ. ವೈಟ್‌ ಬೋರ್ಡ್‌ನ ದ್ವಿಚಕ್ರ ವಾಹನಗಳನ್ನು ಸಹ ಬಾಡಿಗೆಗೆ ಬಳಸುತ್ತಿರುವುದರಿಂದ ತುಂಬಲಾರದಷ್ಟು ನಷ್ಟ ಉಂಟಾಗುತ್ತಿದೆ. ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಆಟೋ ಚಾಲನೆ ಮಾಡುತ್ತಿರುವ ಬಡ ಆಟೋ ಚಾಲಕರಿಗೆ ವಸತಿ ಬಡಾವಣೆ ನಿರ್ಮಾಣ ಮಾಡಿ, ನಿವೇಶನ ಹಂಚಿಕೆ ಮಾಡುವ ಜತೆಗೆ ಆಟೋ ಕಾಲೋನಿ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.

ಸರ್ಕಾರದಿಂದ ನಿಗಮ ಮಂಡಳಿಗಳ ಮೂಲಕ ನೇರ ಸಾಲ ಮತ್ತು ಸಬ್ಸಿಡಿ ಸವಲತ್ತುಗಳನ್ನು ಆಟೋ ಚಾಲಕರು ಮತ್ತು ಮಾಲೀಕರಿಗೆ ಇದುವರೆಗೂ ಸರಿಯಾದ ರೀತಿಯಲ್ಲಿ ದೊರೆಯದೇ ಇದ್ದರಿಂದ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಸವಲತ್ತುಗಳನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಇಲ್ಲಿನ ಐ.ಜಿ. ರಸ್ತೆ, ಎಂ.ಜಿ. ರಸ್ತೆ ಮತ್ತು ಮಾರ್ಕೇಟ್‌ ರಸ್ತೆಗಳಲ್ಲಿ ನಾಲ್ಕು ಚಕ್ರ, ದ್ವಿಚಕ್ರ ವಾಹನಗಳಿಗೆ ನಿಲುಗಡೆಗೆ ವ್ಯವಸ್ಥೆ ಇದ್ದು, ಆಟೋಗಳ ನಿಲುಗಡೆಗೂ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಚಿಕ್ಕಮಗಳೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ರಾಮೇಗೌಡ, ಪ್ರಧಾನ ಕಾರ್ಯದರ್ಶಿ ಎಚ್‌.ಸಿ. ರಾಘವೇಂದ್ರ, ಕಾರ್ಯದರ್ಶಿ ಜಗದೀಶ್‌ ಕೋಟೆ, ಕರವೇ ವಿವಿಧ ಘಟಕಗಳ ಜಿಲ್ಲಾಧ್ಯಕ್ಷ ನೂರುಲ್ಲಾ ಖಾನ್‌, ಅಶೋಕ್‌ ಕೆಂಪನಹಳ್ಳಿ, ಅನಿಲ್‌ಕುಮಾರ್‌, ಪಿ.ಸಿ. ರಾಜೇಗೌಡ ಹಾಗೂ ಆಟೋ ಚಾಲಕರು ಪಾಲ್ಗೊಂಡಿದ್ದರು.28 ಕೆಸಿಕೆಎಂ 1

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ಆಟೋ ಚಾಲಕರು ಮತ್ತು ಮಾಲೀಕರು ಹಾಗೂ ಕರವೇ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.