ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಶೂರರ ನಾಡಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ, ಸರಿಯಾದ ರಸ್ತೆ ಸುರಕ್ಷತಾ ಕ್ರಮಗಳಿಲ್ಲದ ಕಾರಣ ಅಪಘಾತಗಳಿಗೆ ಮುನ್ನುಡಿ ಬರೆಯುತ್ತಿದೆ.ದೇವಾಪುರದಿಂದ ಕವಡಿಮಟ್ಟಿ ಗ್ರಾಮದವರೆಗೆ ಸುಮಾರು 4 ಕಿ.ಮೀ. ವ್ಯಾಪ್ತಿಯ ಬೀದರ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಹೆಚ್ಚಾಗುತ್ತಿರುವ ಅಪಘಾತಗಳ ಸಂಖ್ಯೆಯ ಜತೆಗೆ, ಸಾವಿನ ಪ್ರಮಾಣವೂ ವೃದ್ಧಿಸುತ್ತಿರುವುದಕ್ಕೆ ಇಂತಹದೊಂದು ಅನುಮಾನ ಪ್ರತಿಯೊಬ್ಬರಲ್ಲೂ ಮೂಡಿದೆ.
ಬ್ಲಾಕ್ ಸ್ಪಾಟ್: 100 ರಿಂದ 300 ಮೀ. ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ ಮೂರು ಸಾವುಗಳ ಅಪಘಾತವಾದರೆ ಆ ಭಾಗವನ್ನು ಬ್ಲಾಕ್ ಸ್ಪಾಟ್ ಎನ್ನಲಾಗುತ್ತದೆ. 2023 ಜನವರಿಯಿಂದ ಡಿಸೆಂಬರ್‌ವರೆಗೂ 6 ಅಪಘಾತ ಸಾವುಗಳು ಸಂಭವಿಸಿವೆ. ಅಲ್ಲದೆ 17 ಸಾವು ರಹಿತ ಅಪಘಾತಗಳು ಸಂಭವಿಸಿವೆ. ರಾಜ್ಯ ಹೆದ್ದಾರಿಯಲ್ಲಿ ಮೂರು ಸಾವು ಅಪಘಾತ ಮತ್ತು 8 ಸಾವು ರಹಿತ ಅಪಘಾತಗಳು ಸಂಭವಿಸಿದ ಮಾಹಿತಿಯನ್ನು ಪೊಲೀಸ್ ಇಲಾಖೆ ನೀಡಿದೆ.ಈ ಹೆದ್ದಾರಿಯ ಅಂಚು ತುಂಬು ಚಿಕ್ಕದಾಗಿವೆ. ವೇಗವಾಗಿ ಬರುವ ಎದುರಿಗೆ ಬರುವ ವಾಹನಗಳಿಗೆ ದಾರಿ ಬಿಡಲು ಸ್ವಲ್ಪವೇ ತಿರುಗಿಸಿದರೂ ಹೊಲಗದ್ದೆಗಳಿಗೆ ಹೋಗಿ ಬೀಳುತ್ತಿವೆ.
ಪ್ರಯಾಣಿಕರ ಪ್ರಶ್ನೆ: ದೇವಾಪುರದಿಂದ ಕವಡಿಮಟ್ಟಿಯವರೆಗೆ ಎರಡು ಸೇತುವೆಗಳು ಸಿಗುತ್ತವೆ. ದೇವಾಪುರ ಕ್ರಾಸ್‌ನ ಸಮೀಪದ ಹಳ್ಳಕ್ಕೆ ಬ್ರಿಡ್ಜ್ ನಿರ್ಮಿಸಲಾಗಿದ್ದು, ಅಲ್ಲಿ ಸಾವಿನ ತಿರುವುಗಳಿವೆ. ವಾಹನದ ವೇಗದಲ್ಲಿ ನಿಯಂತ್ರಣ ತಪ್ಪಿದರೂ ಸುಮಾರು 10 ರಿಂದ 15 ಅಡಿ ಕೆಳಗಿರುವ ಪ್ರಪಾತದಂತಿರುವ ಜಮೀನುಗಳಿಗೆ ವಾಹನಗಳು ಉರುಳಿ ಬಿದ್ದು, ಸಾವು ನೋವು ಸಂಭವಿಸುತ್ತಿವೆ. ಇದಕ್ಕೆ ರಸ್ತೆ ಅಂಚುಗಳು ಕಿರಿದಾಗಿರುವುದೇ ಪ್ರಮುಖ ಕಾರಣವಾಗಿದೆ. ಇದು ರಸ್ತೆಯ ಅಂಚುಗಳು ಅಗಲವಾಗುವುದಾದರೂ ಯಾವಾಗ ಎನ್ನುವುದು ಪ್ರಯಾಣಿಕರ ಪ್ರಶ್ನೆಯಾಗಿದೆ.ಆರೋಪ: ಬೀದರ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಾಹನಗಳ ದಟ್ಟಣೆ, ಹೆದ್ದಾರಿಯಲ್ಲೇ ಪಾರ್ಕಿಂಗ್ ಮಾಡುತ್ತಿರುವುದರಿಂದಲೂ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ವೈಫಲ್ಯ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳಿಗೆ ಪ್ರಮುಖ ಕಾರಣ ಸುರಕ್ಷತಾ ಕ್ರಮಗಳಿಲ್ಲದಿರುವುದು. ಇದಕ್ಕೆ ಪೂರಕವಾದ ರಸ್ತೆ ಸಂಚಾರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಫಲವಾಗಿದೆ ಎಂದು ದಲಿತ ಹಿರಿಯ ಮುಖಂಡ ಮಾನಪ್ಪ ಕಟ್ಟಿಮನಿ ದೂರಿದ್ದಾರೆ.ಹೈವೇ ನಿರ್ಲಕ್ಷ್ಯ: ರಾಷ್ಟ್ರೀಯ ಹೆದ್ದಾರಿಯಲ್ಲಿ ವೈಜ್ಞಾನಿಕವಾಗಿ ಅಳವಡಿಸಬೇಕಾದ ಮಾರ್ಗಸೂಚಿಗಳ ನಿಯಮ ಪಾಲಿಸದಿರುವುದು ಈ ಅಪಘಾತಗಳಿಗೆ ಕಾರಣವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ ಕ್ರಾಂತಿ ತಿಳಿಸಿದ್ದಾರೆ.ಕೋಟ್-1
ದೇವಾಪುರ ಕ್ರಾಸಿನ ಸೇತುವೆ ಮುಂಭಾಗ ಮುಳ್ಳುಕಂಟಿಗಳು ಹಸಿರಿನಿಂದ ಹುಲುಸಾಗಿ ಬೆಳೆದಿವೆ. ಇಲ್ಲಿ ಯಾವುದೇ ತಡೆಗೋಡೆಗಳಿಲ್ಲ. 4 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ತಡೆಗೋಡೆಗಳಿಲ್ಲ. ಇದರಿಂದ ವಾಹನಗಳು ಉರುಳಿ ಬೀಳುತ್ತಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಹಮ್ಮಿಕೊಳ್ಳುತ್ತೇವೆ.ಚನ್ನಪ್ಪಗೌಡ ಜೆಕ್ಕನಗೌಡ್ರು ದೇವಾಪುರ.ಎನ್.ಎಚ್.ನವರಿಗೆ ಹೆಚ್ಚಿನ ಅಧಿಕಾರವಿರುತ್ತದೆ. ದೇವಾಪುರ, ನಾಗರಾಳ, ಕುಂಬಾರಪೇಟೆ, ಕ್ರಾಸ್ ಹತ್ತಿರ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸಬೇಕು. ಅಪಘಾತ ನಿಯಂತ್ರಣಕ್ಕೆ ಜಾಗೃತಿಯ ಸೂಚನಾಫಲಕ, ರಿಪ್ಲೆಕ್ಟ್ ಸ್ಟಿಕರ್, ಸ್ಪೀಡ್ ಬ್ರೇಕರ್, ರಸ್ತೆ ಅಗಲೀಕರಣ ಮಾಡಬೇಕು. ದೇವಾಪುರ ವ್ಯಾಪ್ತಿಯನ್ನು ಅಪಘಾತ ವಲಯವಾಗಿ ಘೋಷಿಸಬೇಕು.
ಆನಂದ ವಾಗ್ಮೋಡೆ, ಸಿಪಿಐ ಸುರಪುರ.