ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದ ಚಾಮರಾಜನಗರ ಮತ್ತು ಬೆಳಗಾವಿ ಜಿಲ್ಲೆಯ ಅರಿಶಿಣ ಬೆಳೆಗಾರರಿಗೆ ಪ್ರತ್ಯೇಕ ಎಪಿಎಂಸಿ ಮಾರುಕಟ್ಟೆ ಸ್ಥಾಪಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಅರಿಶಿಣ ಮಂಡಳಿ ಸದಸ್ಯ ಡಾ.ವಿಷ್ಣುವರ್ಧನ ದೇವಲ ನಾಯ್ಕ್ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ಅರಿಶಿಣ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಖ್ಯವಾಗಿ ಚಾಮರಾಜನಗರ, ಬೆಳಗಾವಿ, ಬಾಗಲಕೋಟೆ, ಮೈಸೂರು ಮತ್ತು ಬೀದರ್ ಜಿಲ್ಲೆಗಳಲ್ಲಿ ಅರಿಶಿಣ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಧಾರವಾಡ, ಗದಗ, ಬಳ್ಳಾರಿ, ಹಾವೇರಿ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಲ್ಲಿಯೂ ಅರಿಶಿಣ ಬೆಳೆ ವಿಸ್ತರಿಸಿದೆ. ರಾಜ್ಯದ ಒಟ್ಟು ಅರಿಶಿಣ ಉತ್ಪಾದನೆಯಲ್ಲಿ ಶೇ.75 ರಷ್ಟು ಚಾಮರಾಜನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಉತ್ಪಾದನೆಯಾಗುತ್ತದೆ. ರಾಜ್ಯದಲ್ಲಿ 25000 ರಿಂದ 30000 ಹೆಕ್ಟೇರ್ ಪ್ರದೇಶದಲ್ಲಿ ಅರಿಶಿಣ ಬೆಳೆಯಲಾಗುತ್ತಿದ್ದು, ಪ್ರತಿ ಹೆಕ್ಟೇರ್‌ಗೆ ಸರಾಸರಿ 35 ರಿಂದ 40 ಕ್ವಿಂಟಾಲ್ ಅರಿಶಿಣ ಉತ್ಪಾದಿಸಲಾಗುತ್ತಿದೆ.

ಆದರೆ ಪ್ರತ್ಯೇಕ ಮಾರುಕಟ್ಟೆ ಸೌಲಭ್ಯಗಳು ಇಲ್ಲದ್ದರಿಂದ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಮಾರಾಟ ಮಾಡಲು ಚಾಮರಾಜನಗರ ಮತ್ತು ಹಳೆ ಮೈಸೂರು ಭಾಗದ ರೈತರು ತಮಿಳುನಾಡಿನ ಈರೋಡ್ ಮತ್ತು ಸೇಲಂ ಮಾರುಕಟ್ಟೆಗೆ ಹೋಗಬೇಕಾಗಿದೆ. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ರೈತರು ಮಹಾರಾಷ್ಟ್ರದ ಸಾಂಗ್ಲಿ ಮತ್ತು ಮೀರಜ್ ಮಾರುಕಟ್ಟೆಗಳಿಗೆ ತೆರಳುತ್ತಿದ್ದಾರೆ.

ಅರಿಶಿಣದ ವಾರ್ಷಿಕ ಮಾರುಕಟ್ಟೆ ಮೌಲ್ಯ ಸುಮಾರು ₹ 1347 ಕೋಟಿಯಿಂದ ₹ 2000 ಕೋಟಿ ಇರುವುದಾಗಿ ಅಂದಾಜಿಸಲಾಗಿದೆ. ಆದರೆ, ರಾಜ್ಯದಲ್ಲಿ ಮಾರುಕಟ್ಟೆ ಇಲ್ಲದ್ದರಿಂದ ಮಾರುಕಟ್ಟೆ ಶುಲ್ಕದ ರೂಪದಲ್ಲಿ ಬರಬೇಕಾದ ಸುಮಾರು ₹ 7 ರಿಂದ ₹10 ಕೋಟಿ ಆದಾಯ ನಷ್ಟವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.


ಈ ಬಾರಿಯ ಬಜೆಟ್‌ನಲ್ಲಿ ಯೋಜನೆ ಘೋಷಣೆ ಮಾಡಿ ರೈತರ ಹಿತ ಕಾಪಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.