ಶೀಘ್ರ ಹೆಸರು ಖರೀದಿ ಕೇಂದ್ರ ತೆರೆಯಲು ಆಗ್ರಹ

| Published : Aug 13 2024, 12:51 AM IST

ಸಾರಾಂಶ

ಸರ್ಕಾರ ಹೆಸರು ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿ ಸುಮಾರು ದಿನಗಳು ಕಳೆದರೂ ಬೆಂಬಲ ಬೆಲೆಯಲ್ಲಿ ಖರೀದಿಸಲು ಹಿಂದೇಟು ಹಾಕುತ್ತಿದೆ

ಶಿರಹಟ್ಟಿ: ತಾಲೂಕಿನಲ್ಲಿ ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಸುರಿದಿದ್ದರಿಂದ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರೈತರು ಹೆಸರು ಬೆಳೆ ಬೆಳೆದಿದ್ದು, ಸರ್ಕಾರ ಬೆಂಬಲ ಬೆಲೆಗೆ ಹೆಸರು ಖರೀದಿಸುವ ಕೇಂದ್ರ ಶೀಘ್ರವೇ ತೆರೆಯಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮುಖಂಡ ನಾಗರಾಜ ಕುಲಕರ್ಣಿ ಮಾತನಾಡಿ, ಈಗಾಗಲೇ ರೈತರು ಮುಂಗಾರು ಬೆಳೆಯಾದ ಹೆಸರು ಒಕ್ಕಲು ಮಾಡಿ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಸರ್ಕಾರ ಹೆಸರು ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿ ಸುಮಾರು ದಿನಗಳು ಕಳೆದರೂ ಬೆಂಬಲ ಬೆಲೆಯಲ್ಲಿ ಖರೀದಿಸಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.

ಕಳೆದ ಒಂದು ತಿಂಗಳಿನಿಂದ ಬಿಟ್ಟು ಬಿಡದೆ ಸುರಿದ ಮಳೆಗೆ ಹೇಳಿಕೊಳ್ಳುವಷ್ಟು ಫಸಲು ಬಂದಿಲ್ಲ. ಬಂದ ಫಸಲಿಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ದೊರೆಯುತ್ತಿಲ್ಲ. ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ದರಕ್ಕೆ ಶೀಘ್ರವೇ ಖರೀದಿಗೆ ಮುಂದಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ರೈತ ಮುಖಂಡ ರಮೇಶ ಕೋಳಿವಾಡ ಮಾತನಾಡಿ, ಸತತ ಮೂರು ವರ್ಷಗಳಿಂದ ಬರಗಾಲ ಹಾಗೂ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತಾಲೂಕಿನ ರೈತರು ಕಂಗಾಲಾಗಿದ್ದಾರೆ. ಅಲ್ಪಸ್ವಲ್ಪ ಫಸಲು ಈ ಬಾರಿ ಬಂದಿದ್ದು, ದಲ್ಲಾಳಿಗಳು ಬಾಯಿಗೆ ಬಂದ ದರಕ್ಕೆ ಕೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಪ್ರತಿ ತಾಲೂಕು ಕೇಂದ್ರ ಸ್ಥಳಗಳಲ್ಲಿ ಹೆಸರು ಖರೀದಿ ಕೇಂದ್ರ ಸ್ಥಾಪಿಸಲು ಆದೇಶ ಹೊರಡಿಸಿದ್ದರೂ ಈವರೆಗೂ ಹೆಸರು ಖರೀದಿ ಕೇಂದ್ರ ಸ್ಥಾಪಿಸಲಾಗಿಲ್ಲ. ಹೀಗಾಗಿ ತಾಲೂಕಾಡಳಿತ ಕೂಡಲೇ ಹೆಸರು ಖರೀದಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿ ಹದಬರಿತ ಮಳೆಯಾಗಿದ್ದರಿಂದ ರೈತರು ಅಲ್ಪಸ್ವಲ್ಪ ಹೆಸರು ಬೆಳೆದಿದ್ದಾರೆ. ಹೀಗಾಗಿ ತಾಲೂಕಿನ ಎಲ್ಲ ರೈತರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕೂಡ ಹೆಚ್ಚಿನ ಕಾಳಜಿ ವಹಿಸಿ ಹೆಸರು ಖರೀದಿ ಕೇಂದ್ರ ಸ್ಥಾಪಿಸಬೇಕು. ಇದರ ಜತೆಗೆ ಸರ್ಕಾರದಿಂದ ರೈತರಿಗೆ ಸಿಗಬೇಕಾದ ಬೀಜ, ಗೊಬ್ಬರ ಹಾಗೂ ಬೆಳೆ ವಿಮೆಯಂತ ಎಲ್ಲ ಸೌಕರ್ಯ ಸರಿಯಾಗಿ ವಿತರಿಸಬೇಕು. ತಾಲೂಕಾಡಳಿತ ರೈತರ ಬಗ್ಗೆ ನಿಷ್ಕಾಳಜಿ ತೋರದೆ ರೈತರ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕು ಎಂದರು.

ನಂತರ ತಹಸೀಲ್ದಾರ್‌ ಅನುಪಸ್ಥಿತಿಯಲ್ಲಿ ಶಿರಸ್ಥೆದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ರಾಮನಗೌಡ ಪಾಟೀಲ, ಸಿ.ಬಿ. ಕಲ್ಯಾನಿ, ಮಂಜಪ್ಪ ವರವಿ, ಚನಬಸಪ್ಪ ವರವಿ, ಫಕ್ಕಣ್ಣ ಕಬಾಡಿ, ಮೌನೇಶ ಗೌಳಿ, ರಾಜು ಹೂಗಾರ, ಬಾಬುಸಾಬ ಕೊಡ್ಲಿವಾಡ, ಬಸಪ್ಪ ಪ್ಯಾಟಿ, ಬಸವರಾಜ ಬೆಂತೂರ, ಲಕ್ಷ್ಮಣ ಮರಾಠೆ, ಫಕ್ಕೀರೇಶ ಬಳ್ಳಾರಿ, ಮಾದೇವಪ್ಪ ಕೋಡಿಹಳ್ಳಿ, ದೇವೇಂದ್ರ ಬಡಖಂಡಪ್ಪನವರ, ಅಶೋಕ ಬಾವನೂರ, ಪರಸಪ್ಪ ಕೋಡಿಹಳ್ಳಿ, ಮಹಾಂತೇಶ ಶ್ಯಾಗೋಟಿ, ರಮೇಶ ಲಮಾಣಿ, ಕಮಲವ್ವ ಕೋಡಿಹಳ್ಳಿ, ನೀಲವ್ವ ಬೆಂತೂರ ಸೇರಿದಂತೆ ಅನೇಕರು ಮನವಿ ನೀಡುವಲ್ಲಿ ಇದ್ದರು.