ಸಾರಾಂಶ
ರಟ್ಟೀಹಳ್ಳಿ:ಕೇಂದ್ರ ಸರಕಾರ ಮೆಕ್ಕೆಜೋಳ ಪ್ರತಿ ಕ್ವಿಂಟಲ್ಗೆ 2400 ದರ ನಿಗದಿ ಮಾಡಿದ್ದು ಕೂಡಲೇ ಪ್ರತಿ ತಾಲೂಕಿನಲ್ಲಿ ಖರೀದಿ ಕೇಂದ್ರ ಸ್ಥಾಪನೆ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆಗ್ರಹಿಸಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸತತ ಕಳೆದ 4 ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ರೈತರ ಜೀವನ ಮೂರಾಬಟ್ಟೆಯಾಗಿದೆ, ಪ್ರಸ್ತುತ ವರ್ಷ ಹೆಚ್ಚು ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾದ್ದರಿಂದ ಪ್ರತಿ ಎಕರೆಗೆ 10ರಿಂದ 15 ಕ್ವಿಂಟಾಲ್ ಇಳುವರಿ ಬಂದಿದ್ದು ಅಳಿದುಳಿದ ಬೆಳೆಗಳನ್ನು ಉಳಿಸಿಕೊಂಡು ಮಾಡಿದ ಖರ್ಚು ತೆಗೆಯಲಾಗದೆ ಅನ್ನದಾತ ಕಂಗಾಲಾಗಿದ್ದಾನೆ. ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಇದರ ನಡುವೆ ಮೆಕ್ಕೆಜೋಳ 1500ರಂತೆ ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದು, ಪ್ರತಿ ಕ್ವಿಂಟಲ್‍ಗೆ 900 ರು. ಹಾನಿಯಾಗುತ್ತಿದೆ. ಕೇಂದ್ರ ಸರಕಾರ 2400 ಎಮ್.ಎಸ್.ಪಿ ದರ ನಿಗದಿ ಮಾಡಿದ್ದು ಅದರಂತೆ ತಕ್ಷಣ ಪ್ರತಿ ತಾಲೂಕಿನಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು, ಇಲ್ಲವಾದಲ್ಲಿ ಜಿಲ್ಲಾದ್ಯಂತ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಪ್ರಸ್ತುತ ವರ್ಷ ಅತಿ ಮಳೆಯಿಂದಾಗಿ ಮೆಕ್ಕೆಜೋಳ, ಸೋಯಾಬಿನ್, ಹತ್ತಿ, ಶೇಂಗಾ ಹಾಗೂ ತೋಟಗಾರಿಕೆ ಬೆಳೆಗಳು ನಾಶವಾಗಿದ್ದು, ಈಗಾಗಲೇ ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿ ಅನೇಕ ತಿಂಗಳುಗಳು ಕಳೆದಿವೆ. ಬೆಳೆ ಸಮೀಕ್ಷೆಯಲ್ಲೂ ನಿಷ್ಠೆ ತೋರದ ಅಧಿಕಾರಿಗಳು ಕಾಟಾಚಾರ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ನೀಡಿದ್ದಾರೆ. ಇತ್ತೀಚೆಗೆ ನಡೆದ ರೈತರ ಹೋರಾಟದ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಜಿಲ್ಲಾಧಿಕಾರಿಗಳು ಅಕ್ಟೋಬರ 1ನೇ ತಾರೀಖಿಗೆ ಬೆಳೆ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದರು. ಈವರೆಗೂ ಬೆಳೆ ಪರಿಹಾರ ನೀಡದ ಸರಕಾರ ನಿರ್ಲಕ್ಷ್ಯವಹಿಸಿದೆ. ಇದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಗ್ರವಾಗಿ ಖಂಡಿಸುತ್ತದೆ ತಕ್ಷಣ ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಪ್ರತಿ ಹೆಕ್ಟೇರ್‌ಗೆ 8500 ಹಾಗೂ ಎಸ್.ಡಿ.ಎಫ್ ಪ್ರಕಾರ 8500 ಸೇರಿಸಿ ಒಟ್ಟು 1700 ಸಾವಿರ ತಕ್ಷಣ ಹಣ ಬಿಡುಗಡೆ ಮಾಡಬೇಕು, ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.ರೈತ ಮುಖಂಡ ಶಂಕರಗೌಡ ಶಿರಗಂಬಿ ಮಾತನಾಡಿ, ಹಾವೇರಿ ಜಿಲ್ಲೆ ಸತತ ನಾಲ್ಕು ವರ್ಷಗಳಿಂದ ಅತಿ ವೃಷ್ಠಿ ಹಾಗೂ ಅನಾವೃಷ್ಟಿಯಿಂದ ಬಳಲುತ್ತಿದ್ದು ನಮ್ಮನ್ನಾಳುವ ಸರಕಾರಗಳು ಮಾತ್ರ ಅನ್ನದಾತರರ ನೆರವಿಗೆ ಧಾವಿಸದೇ ತಮ್ಮ ಕುರ್ಚಿಗಾಗಿ ಕಿತ್ತಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ, ಹಾವೇರಿ ಜಿಲ್ಲೆ ರೈತ ಆತ್ಮಹತ್ಯೆಯಲ್ಲಿ ಮೊದಲ ಸ್ಥಾನದ ಹಣೆ ಪಟ್ಟಿ ಪಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕಾರಣ ಯಾವೊಬ್ಬ ರೈತರು ಎದೆಗುಂದದೆ ನಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತರಾಗೋಣ ಎಂದು ಕರೆ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನ.10.ರಿಂದ ಪ್ರತಿ ತಾಲೂಕಿನ ತಹಸೀಲ್ದಾರ ಕಚೇರಿ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೋಳ್ಳಲಾಗಿದ್ದು, ನ.12 ಬುಧವಾರದಂದು ರಟ್ಟೀಹಳ್ಳಿ ತಹಸೀಲ್ದಾರ ಕಚೇರಿಯಲ್ಲಿ ಪ್ರತಿಭಟನೆ ಹಮ್ಮಿಕೋಳ್ಳಲಾಗಿದೆ ಕಾರಣ ತಾಲೂಕಿನ ಎಲ್ಲ ರೈತರು ಹೋರಾಟಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ಎಚ್.ಎಚ್. ಮುಲ್ಲಾ, ಶಂಭು ಮುತ್ತಗಿ, ಮಂಜುನಾಥಗೌಡ ಸಣ್ಣಗೌಡ್ರ, ಕರಬಸಪ್ಪ ಬಸಾಪೂರ, ಎ.ಆರ್. ಮಣಕೂರ, ಫಯಾಜಸಾಬ್ ದೊಡ್ಡಮನಿ ಮುಂತಾದವರು ಇದ್ದರು.ಕಾಡುಪ್ರಾಣಿಗಳ ಹಾವಳಿ ಹೆಚ್ಚಳ: ರಟ್ಟೀಹಳ್ಳಿ, ಹಿರೇಕೆರೂರ ತಾಲೂಕಿನಾದ್ಯಂತ ಕಾಡು ಪ್ರಾಣಿ ಹಾಗೂ ಚಿರತೆ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗೆ ತಾಲೂಕಿನ ಕಣವಿಸಿದ್ಗೇರಿ ಗ್ರಾಮದ ಯುವ ರೈತ ಚಿರತೆ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದು ನಮಗೆ ಅತ್ಯಂತ ನೋವಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಎಂದರು.ಸರಕಾರ ಸತ್ತ ಮೇಲೆ ನೀಡುವ ಪರಿಹಾರ ನಮಗೆ ಬೇಕಿಲ್ಲ. ರೈತನ ಜೀವ ಕೋಟಿ ಕೊಟ್ಟರೂ ಸಿಗುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಚಿರತೆ ಹಾವಳಿಯಿಂದಾಗಿ ರೈತರು ಹಾಗೂ ಕೃಷಿ ಕಾರ್ಮಿಕರು ಹೊಲಗಳಿಗೆ ತೆರಳಲು ಭಯಭೀತರಾಗಿದ್ದು, ಅರಣ್ಯ ಇಲಾಖೆಗೆ ಸಾಕಷ್ಟು ಅನುದಾನವಿದ್ದರೂ ಆಧುನಿಕ ಯಂತ್ರೋಪಕರಣ ಬಳಕೆ ಮಾಡುತ್ತಿಲ್ಲ. ಕೇವಲ ಕಾಟಾಚಾರಕ್ಕೆ ಬೋನ್ ಅಳವಡಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯುವಲ್ಲಿ ವಿಫಲವಾಗಿದೆ. ಆದ್ದರಿಂದ ತಕ್ಷಣ ನುರಿತ ತಂಡ ಕರೆಸಿ ಚಿರತೆ ಸೆರೆ ಹಿಡಿಯಬೇಕು, ಇಲ್ಲವಾದಲ್ಲಿ ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.