ಶಿರಹಟ್ಟಿ: ತಾಲೂಕಿನಲ್ಲಿ ಶಾಲಾ ಕೊಠಡಿಗಳ ದುರಸ್ತಿಗೆ ಸರ್ಕಾರ ೨೦.೫೦ ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಏಪ್ರಿಲ್ ತಿಂಗಳ ಕೊನೆಯೊಳಗೆ ಶಾಲೆಗಳನ್ನು ಗುರುತಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ನೀಡಬೇಕು ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಗುರುವಾರ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖಾವಾರು ಚರ್ಚೆ ನಡೆಸಿ ಮಾತನಾಡಿದರು. ದುರಸ್ತಿಗೆ ಬಂದ ಶಾಲೆಗಳನ್ನು ಗುರುತಿಸಿ ಮೇ ಮೊದಲನೆ ವಾರದಲ್ಲಿ ನೀವು ಸಲ್ಲಿಸಿದ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಬೇಕು. ಸರ್ಕಾರದ ಅನುದಾನ ಸಮರ್ಪಕ ಬಳಕೆಗೆ ಕ್ರಮ ವಹಿಸಬೇಕು ಎಂದರು.ಶೈಕ್ಷಣಿಕವಾಗಿ ತಾಲೂಕು ಬಹಳಷ್ಟು ಹಿಂದುಳಿದಿದೆ. ಈ ಬಾರಿಯ ಪಿಯುಸಿ ಫಲಿತಾಂಶವನ್ನು ಗಮನಿಸಿದರೆ ಶೈಕ್ಷಣಿಕ ಪ್ರಗತಿ ಯಾವ ಹಂತದಲ್ಲಿದೆ ಎಂಬುದು ತಿಳಿಯುತ್ತಿದೆ. ಅದಕ್ಕಾಗಿ ಮೊದಲು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತಂದು ಮುಖ್ಯ ವಾಹಿಸಿಗೆ ತರುವ ಕೆಲಸವಾಗಬೇಕು. ಬರೀ ಎಸ್‌ಎಸ್‌ಎಲ್‌ಸಿ ಹಂತದಲ್ಲಿರುವ ಮಕ್ಕಳಿಗೆ ಬೆಳಗಿನ ಜಾವ ಬೇಗ ಎದ್ದು ಓದುವಂತೆ ಪ್ರೇರೇಪಿಸಿದರೆ ಸಾಲದು.೮, ೯, ೧೦ನೇ ತರಗತಿಯಿಂದಲೇ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಆಯಾ ಹಂತದಲ್ಲಿ ಮಕ್ಕಳಿಗೆ ಪರೀಕ್ಷೆ ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಮತ್ತು ಅವರಲ್ಲಿರುವ ಕಲಿಕಾ ಗುಣಮಟ್ಟ ಪರೀಕ್ಷಿಸುವ ಕಾರ್ಯ ಶಿಕ್ಷಕರಿಂದ ಆಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ಫಲಿತಾಂಶ ಸುಧಾರಣೆ ಮಾಡಲು ಸಾಧ್ಯವಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಈ ವ್ಯವಸ್ಥೆ ಅಳವಡಿಸಬೇಕು ಎಂದರು.ತಾಲೂಕಿನಲ್ಲಿ ಸ್ವಂತ ಕಟ್ಟಡ ಹೊಂದಿರುವ ೯೨ ಅಂಗನವಾಡಿ ಕೇಂದ್ರಗಳಿರುವ ಬಗ್ಗೆ ಸಿಡಿಪಿಒ ಮೃತ್ಯುಂಜಯ ಗುಡ್ಡದಾನವೇರಿ ಮಾಹಿತಿ ನೀಡುತ್ತಿದ್ದಂತೆ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಅಗತ್ಯತೆ ಪರಿಶೀಲನೆ ಮಾಡಿ ಸಿಂಟೆಕ್ಸ್, ವಿದ್ಯುತ್, ಪೈಪ್ಲೈನ್ ಇದೆಯೋ ಇಲ್ಲವೋ ಎಂಬುದನ್ನು ಗಮನಿಸಿ ಆರ್‌ಒ(ನೀರು ಶುದ್ಧೀಕರಣ ಯಂತ್ರ) ಅಳವಡಿಕೆಗೆ ಸರಿಯಾದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.ಈಗಾಗಲೇ ಪೂರ್ವ ಮುಂಗಾರು ಆರಂಭವಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಅಭಾವ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಅವರಿಗೆ ಎ.ಎ. ಕಂಬಾಳಿಮಠ ತಿಳಿಸಿದರು.

ಈ ಕುರಿತಂತೆ ಪ್ರತಿಕ್ರಿಯಿಸಿದ ಅಧಿಕಾರಿ, ಮುಂಗಾರು ಪೂರ್ವದಲ್ಲಿಯೇ ರೈತರು ರಸಗೊಬ್ಬರ ದಾಸ್ತಾನು ಮಾಡಿಕೊಂಡಿದ್ದಾರೆ. ಬಿತ್ತನೆ ಬೀಜ ಕೂಡ ಬೇಡಿಕೆಯಂತೆ ದಾಸ್ತಾನು ಇದೆ. ರೈತರಿಗೆ ತೊಂದರೆ ಆಗದಂತೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ರೈತರಲ್ಲಿ ಜಾಗೃತಿ ಮೂಡಿಸಿ:ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರತಿ ವರ್ಷವೂ ಈರುಳ್ಳಿ, ಮೆಣಸಿನಕಾಯಿ ಬೆಳೆ ಬಗ್ಗೆ ಮಾಹಿತಿ ನೀಡುತ್ತಿದ್ದು, ಹಣ್ಣು, ತರಕಾರಿ, ಹೂವು ಬೆಳೆಯುವ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು. ಮೊದಲು ಅಧಿಕಾರಿಗಳು ಸಮಗ್ರವಾಗಿ ತಿಳಿದುಕೊಳ್ಳಬೇಕು. ಒಟ್ಟು ನೀರಾವರಿ ಕ್ಷೇತ್ರ ಎಷ್ಟು, ರೈತರು ಯಾವ ಬೆಳೆ ಬೆಳೆದರೆ ಆರ್ಥಿಕವಾಗಿ ಸುಧಾರಣೆ ಹೊಂದಬಹುದು ಎನ್ನುವ ಕುರಿತು ರೈತರಲ್ಲಿ ತಿಳಿವಳಿಕೆ ಮೂಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.ರೇಷ್ಮೆ ಇಲಾಖೆ ಅಧಿಕಾರಿಗಳು ಕೂಡ ರೇಷ್ಮೆ ಬೆಳೆ ಬೆಳೆಯುವ ಕುರಿತು ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ರಾಮನಗರ ಬಿಟ್ಟರೆ ಶಿರಹಟ್ಟಿ ತಾಲೂಕು ಕೇಂದ್ರದಲ್ಲಿಯೇ ಹೆಚ್ಚಿನ ರೇಷ್ಮೆ ವಹಿವಾಟು ನಡೆಯುವ ಮಾರುಕಟ್ಟೆ ಎಂಬ ಹೆಗ್ಗಳಿಕೆ ಇತ್ತು. ರೇಷ್ಮೆ ಮಾರುಕಟ್ಟೆ ಅಧಿಕಾರಿಗಳ ಬೇಜವಾಬ್ದಾರಿಯೋ ಅಥವಾ ರೇಷ್ಮೆ ಖರೀದಿದಾರರು ಒಳ ಒಪ್ಪಂದದಿಂದ ರೇಷ್ಮೆ ಗೂಡಿಗೆ ಯೋಗ್ಯ ಬೆಲೆ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ರೇಷ್ಮೆ ಮಾರುಕಟ್ಟೆ ಬಂದಾಗಿದೆ ಎನ್ನುವ ಮಾತುಗಳು ರೈತರಿಂದ ಕೇಳಿಬರುತ್ತಿವೆ. ಈ ಕುರಿತು ಪರಿಶೀಲನೆ ಮಾಡಬೇಕು ಎಂದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ, ಹನುಮೇಶ ಕೊಂಡಿಕೊಪ್ಪ, ಶಿಕ್ಷಣ ಇಲಾಖೆಯ ರಾಮಚಂದ್ರಪ್ಪ ಪವಾರ, ಸುಭಾಸ ದೈಗೊಂಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.