ಸಾರಾಂಶ
ತಾಲೂಕಿನ ದಿಂಡಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರವ್ವ ನಾಗತಿಹಳ್ಳಿ, ಹೊಸಹಳ್ಳಿ ಗ್ರಾಮದ ನೀರಗಂಟಿ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ತಹಸೀಲ್ದಾರ್ ಕಚೇರಿಗೆ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ದಿಂಡಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರವ್ವ ನಾಗತಿಹಳ್ಳಿ, ಹೊಸಹಳ್ಳಿ ಗ್ರಾಮದ ನೀರಗಂಟಿ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ತಹಸೀಲ್ದಾರ್ ಕಚೇರಿಗೆ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಲಾಯಿತು.ಈ ವೇಳೆ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಆ ಗ್ರಾಮದಲ್ಲಿ ಅತಿ ಹೆಚ್ಚಿನದಾಗಿ ಮಾದಿಗರೇ ವಾಸ ಮಾಡುತ್ತಿದ್ದು, ಅವರ ಮನೆಗಳಿಗೆ ನೀರು ಬಿಡಲು ತಾರತಮ್ಯ ತೋರಲಾಗುತ್ತಿದೆ. ಅಲ್ಲಿನ ನೀರಗಂಟಿ ಟ್ಯಾಂಕ್ ನ ಪಕ್ಕದ ಜಾಗವನ್ನು ಖರೀದಿಸಿದ ನಂತರ ಕುಡಿಯುವ ನೀರಿನ ಟ್ಯಾಂಕನ್ನು ಸೇರಿಸಿಕೊಂಡು ಕಾಂಪೌoಡ್ ನಿರ್ಮಿಸಿಕೊಂಡಿದ್ದಾನೆ ಎಂದು ಆರೋಪಿಸಿದರು.
ಈ ವಿಚಾರವಾಗಿ ಈಗಾಗಲೇ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ರಾಜಿ ಮಾಡಿಕೊಂಡು ದೂರು ಹಿಂಪಡೆಯಲಾಗಿತ್ತು. ಇದೀಗ ಸಾರ್ವಜನಿಕರ ಉಪಯೋಗಕ್ಕೆಂದು ಇರುವ ಕುಡಿಯುವ ನೀರಿನ ಟ್ಯಾಂಕನ್ನು ಬಳಸಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡಿರುವ ನೀರಗಂಟಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.ಆತನಿಗೆ ಕುಡಿಯುವ ನೀರಿನ ಟ್ಯಾಂಕ್ ನ ಜಾಗವನ್ನು ಸೇರಿಸಿ ಇ- ಸ್ವತ್ತು ಮಾಡಿಕೊಟ್ಟ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಯ ಮೇಲೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಇ- ಸ್ವತ್ತು ಆಗಿರುವುದನ್ನು ರದ್ದುಗೊಳಿಸದಿದ್ದಲ್ಲಿ ತಾಲೂಕು ಪಂಚಾಯಿತಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಹಿರಿಯ ಉಪಾಧ್ಯಕ್ಷ ಕಣುಮೇಶ್, ಅಲ್ಪಸಂಖ್ಯಾತರ ಘಟಕದ ಗೌರವಾಧ್ಯಕ್ಷ ಸನಾವುಲ್ಲ, ಉಪಾಧ್ಯಕ್ಷ ಲಕ್ಷ್ಮಣ್ ರಾವ್, ಗಿರೀಶ್, ದಿಂಡಾವರ ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್ವರಪ್ಪ, ಮಾಜಿ ಸದಸ್ಯ ನೀಲಕಂಠಪ್ಪ, ಗ್ರಾಮಸ್ಥರಾದ ವೆಂಕಟರಾಮ್, ಕರಿಯಪ್ಪ, ವಿರುಪಾಕ್ಷ, ರಂಗನಾಥ, ಅಭಿಷೇಕ್, ತಿಪ್ಪೇಸ್ವಾಮಿ, ಶಶಿಕುಮಾರ್, ಗಿರೀಶ್, ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು.