ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ರೈತರ ಆತ್ಮಹತ್ಯೆ ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದವರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟಿಸಿದರು.ಕಾಂಗ್ರೆಸ್ ರಾಜ್ಯ ಸರ್ಕಾರದ ಒಂದು ವರ್ಷದ ಆಡಳಿತದಲ್ಲಿ ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟ 187 ಕೋಟಿ ರೂ. ದುರುಪಯೋಗ ಹಗರಣದ ಆರೋಪಕ್ಕೆ ಒಳಗಾಗಿದೆ. ಭೂ ಮಾಫಿಯಗಳ ಅಕ್ರಮಗಳು ನಿರಂತರವಾಗಿ ಸಾಗುತ್ತಲೇ ಇವೆ. ರೈತರ ಆತ್ಮಹತ್ಯೆಯೂ ಅಘಾತಕಾರಿಯಾಗಿದೆ. 2023ರ ಏಪ್ರಿಲ್ತಿಂಗಳಿಂದ 2024ರ ಜೂನ್ತಿಂಗಳವರೆಗೆ ರಾಜ್ಯದಲ್ಲಿ 1182 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯುವ ರೈತರ ಆತ್ಮಹತ್ಯೆ ಆತಂಕಕ್ಕೀಡು ಮಾಡಿದೆ. ಆತ್ಮಹತ್ಯೆ ತಡೆಗೆ ರೈತರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದರು.
ರೈತರು ಕೃಷಿ ಪಂಪ್ ಸೆಟ್ ಗೆ ವಿದ್ಯುತ್ಸಂಪರ್ಕ ಪಡೆಯಲು ಸ್ವತಃ ವೆಚ್ಚವನ್ನು ಭರಿಸಬೇಕೆಂಬ ತೀರ್ಮಾನವನ್ನು ವಾಪಸ್ಪಡೆಯಬೇಕು. ರಾಜ್ಯ ಸರ್ಕಾರವೇ ಕೃಷಿ ಉತ್ಪನ್ನಗಳಿಗೆ ಎಂ.ಎಸ್.ಪಿ ನಿಗದಿ ಮಾಡಿ ಖರೀದಿಸಬೇಕು. ಬ್ಯಾಂಕುಗಳ ಸಾಲ ಬಾಕಿ ವಸೂಲಿಗಾಗಿ ರೈತರಿಗೆ ಕಿರುಕುಳ ನೀಡುತ್ತಿರುವುದನ್ನು ತಪ್ಪಿಸಬೇಕು. ಎಲ್ಲಾ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲು ಬೀಮಾ ಯೋಜನೆಯನ್ನು ವಿಸ್ತರಿಸಿ, ಗ್ರಾಮ ಮಟ್ಟದಲ್ಲಿ ಬೆಳೆ ಹಾನಿ ನಿರ್ಧರಿಸಬೇಕು. ವಿಮಾ ಕಂಪನಿಗಳು ಉಳಿಸಿಕೊಂಡಿರುವ ಬಾಕಿಯನ್ನು ಕೂಡಲೇ ವಿತರಿಸಬೇಕು ಎಂದು ಅವರು ಆಗ್ರಹಿಸಿದರು.ಫಸಲು ಪಹಣಿ ದುರಸ್ತಿ, ಪಕ್ಕಾಪೋಡು ಹದ್ದು ಬಸ್ತು ಶುಲ್ಕ ದುಬಾರಿಯಾಗಿದ್ದು, ಇಳಿಸಬೇಕು. ಖರೀದಿ ಕೇಂದ್ರದಿಂದ ಖರೀದಿಸಲಾದ ಉತ್ಪನ್ನಗಳಿಗೆ ಕೂಡಲೇ ಹಣ ಕೊಡಬೇಕು. ಬರ ಪರಿಹಾರ, ವಿಮಾ ಪರಿಹಾರದ ಹಣವನ್ನು ಸಾಲಕ್ಕೆ ಜಮಾ ಮಾಡದಂತೆ ಬ್ಯಾಂಕ್ ಗಳಿಗೆ ಸೂಚಿಸಬೇಕು. ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖಾ ಕಿರುಕುಳವನ್ನು ತಪ್ಪಿಸಿ, ಎಲ್ಲಾ ರೈತರಿಗೂ ಪಟ್ಟಾ ನೀಡಬೇಕು. ಕಾಡು ಪ್ರಾಣಿಗಳಿಂದ ಬೆಳೆ ನಷ್ಟಕ್ಕೆ ವೈಜ್ಞಾನಿಕ ನಷ್ಟ ನಿಗದಿಪಡಿಸಬೇಕು. ರೈತರ ಜಮೀನಿನಲ್ಲಿ ಸಾಗುವನಿ ಮರ ಕಡಿತ ಮತ್ತು ಸಾಗಾಣಿಕೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ಟನ್ಒಂದಕ್ಕೆ 150 ರೂ. ಪಾವತಿಸಬೇಕೆಂದು ಹಿಂದಿನ ಸರ್ಕಾರ ತೀರ್ಮಾನಿಸಿದ್ದು, ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ರೈತರ ಖಾತೆಗೆ ಹಣ ಜಮೆ ಮಾಡಬೇಕು. ಎಸ್.ಎ.ಪಿ ಘೋಷಿಸಬೇಕು. ಭೂ ಸುಧಾರಣಾ ತಿದ್ದುಪಡಿ ಕಾಯಿದೆ, ಗೋ ಹತ್ಯೆ ನಿಷೇಧ ಕಾಯಿದೆಯನ್ನು ಕೂಡಲೇ ಹಿಂಪಡೆಯಬೇಕು. ಕಂದಾಯ ಬೀಳು, ಕ್ರಯದ ಬೀಳು ರೇಷ್ಟೋರ್ ಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.ಕೆ.ಆರ್.ಎಸ್ಬಳಿ ಟ್ರಯಲ್ಬ್ಲಾಸ್ಟ್ ಮಾಡಬಾರದು. ಜಲಾಶಯದ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಬೇಕು. ಎಂಡಿಎ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ನಿಷ್ಪಕ್ಷವಾಗಿ ಕ್ರಮ ಕೈಗೊಳ್ಳಬೇಕು. ಕಾವೇರಿ ಜಲಾಶಯದಲ್ಲಿ ನೀರಿನ ಶೇಖರಣೆ ಕಡಿಮೆ ಇರುವುದರಿಂದ ತಮಿಳುನಾಡಿಗೆ ನೀರು ಹರಿಸಬಾರದು. ಮೈಸೂರು ತಾಲೂಕು ಕೋಚನಹಳ್ಳಿ ರೈತರಿಗೆ ಮೋಸ ಮಾಡಿರುವ ಭೂಮಾಫಿಯಾ ಕುಳಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಮುಖಂಡರಾದ ಪ್ರಸನ್ನ ಎನ್. ಗೌಡ, ಪಿ. ಮರಂಕಯ್ಯ, ಮಂಡಕಳ್ಳಿ ಮಹೇಶ್ ಮೊದಲಾದವರು ಇದ್ದರು.