ಚಿರತೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲರಾಗಿದ್ದಾರೆ. ಚಿರತೆ ದಾಳಿಯಿಂದ ಆಡು, ಕುರಿ, ಹಸುಗಳನ್ನು ಕಳೆದುಕೊಂಡ ರೈತರು ನಷ್ಟವನ್ನು ಅನುಭವಿಸಿ ಸಂಕಷ್ಟ ಜೀವನ ನಡೆಸುವಂತಾಗಿದೆ. ರೈತರು ರಾತ್ರಿ ಸಮಯದಲ್ಲಿ ನೆಮ್ಮದಿಯಿಂದ ನಿದ್ದೆಮಾಡಲು ಸಾಧ್ಯವಾಗುತ್ತಿಲ್ಲ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಚಿರತೆ ಹಾವಳಿ ತಡೆಗಟ್ಟುವುದರ ಜೊತೆಗೆ ಜಾನುವಾರುಗಳನ್ನು ಕಳೆದುಕೊಂಡು ನಷ್ಟಕೊಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ಅಗ್ರಹಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು, ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಅರಣ್ಯ ಇಲಾಖೆ ಕಚೇರಿ ಎದುರು ಆಗಮಿಸಿ ಧರಣಿ ಕುಳಿತ ಕಾರ್ಯಕರ್ತರು, ಕಾಡಂಚಿನ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಅರಣ್ಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ರೈತರ ಸಮಸ್ಯೆಗಳನ್ನು ತಕ್ಷಣದಲ್ಲಿಯೇ ಬಗೆಹರಿಸಬೇಕೆಂದು ಅಗ್ರಹಿಸಿದರು.
ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಭರತ್‌ರಾಜ್ ಮಾತನಾಡಿ, ಚಿರತೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲರಾಗಿದ್ದಾರೆ. ಚಿರತೆ ದಾಳಿಯಿಂದ ಆಡು, ಕುರಿ, ಹಸುಗಳನ್ನು ಕಳೆದುಕೊಂಡ ರೈತರು ನಷ್ಟವನ್ನು ಅನುಭವಿಸಿ ಸಂಕಷ್ಟ ಜೀವನ ನಡೆಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರು ರಾತ್ರಿ ಸಮಯದಲ್ಲಿ ನೆಮ್ಮದಿಯಿಂದ ನಿದ್ದೆಮಾಡಲು ಸಾಧ್ಯವಾಗುತ್ತಿಲ್ಲ. ಕಷ್ಟಪಟ್ಟು ಸಾಕಿದ ಜಾನುವಾರುಗಳನ್ನು ಕಣ್ಣುಮುಂದೆಯೇ ಎಳೆದುಕೊಂಡು ಹೋಗುತ್ತಿವೆ ಎಂದು ಕಿಡಿಕಾರಿದರು.
ಸರ್ಕಾರ ನೀಡುವ ಅಲ್ಪ ಪರಿಹಾರಕ್ಕೂ ನೂರೆಂಟು ನಿಯಮಗಳನ್ನು ವಿಧಿಸಲಾಗುತ್ತಿದೆ. ಪರಿಹಾರ ಕೆಲವರಿಗೆ ಸಿಕ್ಕರೇ ಮತ್ತೆ ಕೆಲವರಿಗೆ ಸಿಗುತ್ತಿಲ್ಲ. ಜಾನುವಾರುಗಳು ದಾಳಿಗೆ ಒಳಗಾದಾಗ ಮಹಜರು ಮಾಡಿ ದಾಖಲು ಮಾಡಲು ಪಶುಪಾಲನಾ ಇಲಾಖೆ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲು ಸತಾಯಿಸುತ್ತಾರೆಂದು ಆರೋಪಿಸಿದರು.ಚಿರತೆ ಭಯದಲ್ಲಿ ರೈತರು ತಮ್ಮ ಹೊಲ ಗದ್ದೆಗಳಿಗೆ ಹೋಗಲು ಭಯ ಪಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಚಿರತೆ ದಾಳಿ ನಡೆಯದಂತೆ ಎಚ್ಚರಿಕೆ ವಹಿಸಬೇಕು. ನಷ್ಟಕೊಳಗಾದ ರೈತರಿಗೆ ಪರಿಹಾರ ನೀಡಬೇಕೆಂಬ ಮನವಿಯನ್ನು ಅರಣ್ಯ ಅಧಿಕಾರಿ ಮಹದೇವಸ್ವಾಮಿ ಅವರಿಗೆ ನೀಡಿದರು.
ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ತಾಲೂಕು ಉಪಾಧ್ಯಕ್ಷ ಗುರುಸ್ವಾಮಿ, ಕಾರ್ಯದರ್ಶಿ ಎನ್.ಲಿಂಗರಾಜುಮೂರ್ತಿ, ಮುಖಂಡರಾದ ಮರಿಲಿಂಗೇಗೌಡ, ಚಿಕ್ಕಸ್ವಾಮಿ, ಎನ್.ಮಹದೇವಯ್ಯ, ಕೆ.ಎನ್.ಮೂರ್ತಿ, ಜಿ.ಜೆ.ಸತೀಶ್, ನಾಗಮಣಿ, ಪದ್ಮ, ಪವಿತ್ರ, ಪ್ರೇಮ,ಶಿವರಾಮು, ಚಿಕ್ಕರಾಚಯ್ಯ ಸೇರಿದಂತೆ ಇತರರು ಇದ್ದರು.